ಅಮಾನತ್ತುಗೊಳಿಸಿದ 60 ಸಿಬ್ಬಂದಿಗಳಲ್ಲಿ ಮನವಿ ಮಾಡಿದ 8 ಸಿಬ್ಬಂದಿಗಳನ್ನು ಅಮಾನತ್ತಿನಿಂದ ತೆರವು
ಹುಬ್ಬಳ್ಳಿ; ಉಚ್ಚ ನ್ಯಾಯಾಲಯದ ಆದೇಶದನ್ವಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 506 ಸಿಬ್ಬಂದಿಗಳ ವರ್ಗಾವಣೆಯಲ್ಲಿ 115 ಸಿಬ್ಬಂದಿಗಳ ವರ್ಗಾವಣೆಯನ್ನು ರದ್ದುಪಡಿಸಿ, ಹಾಗೂ ಅಮಾನತ್ತುಗೊಳಿಸಿದ 60 ಸಿಬ್ಬಂದಿಗಳಲ್ಲಿ ಮನವಿ ಸಲ್ಲಿಸಿದ 8 ಸಿಬ್ಬಂದಿಗಳನ್ನು ಅಮಾನತ್ತಿನಿಂದ ತೆರವುಗೊಳಿಸಲಾಗಿದೆ ಎಂದು ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು,
6 ನೇ ವೇತನ ಆಯೋಗದ ವೇತನ ಶ್ರೇಣಿಯನ್ನು ಸಾರಿಗೆ ನಿಗಮಗಳಲ್ಲಿ ಜಾರಿಗೊಳಿಸಬೇಕೆಂದು ನಾಲ್ಕು ನಿಗಮಗಳ ನೌಕರರು ಅನಿರ್ದಿಷ್ಠಾವಧಿ ಮುಷ್ಕರ ಕೈಗೊಂಡಿದ್ದರಿಂದ 15 ದಿನಗಳ ಕಾಲ ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗಿ ಸಂಸ್ಥೆಗೂ ಸಹ ಗಣನೀಯ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ. ಮುಷ್ಕರದ ಆರಂಭದಿಂದಲೂ ಎಲ್ಲ ಚಾಲನಾ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ವಿಭಾಗ ಮಟ್ಟದ ಅಧಿಕಾರಿಗಳಿಂದ ಕೇಂದ್ರ ಕಛೇರಿಯ ಮಟ್ಟದ ಅಧಿಕಾರಿಗಳಿಗೂ ವೈಯಕ್ತಿಕವಾಗಿ ಮನವರಿಕೆ ಮಾಡಿ ಸಂದೇಶ ಕಳುಹಿಸಲಾಗಿತ್ತು.
ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಹಾಜರಾಗಲು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದರೂ ಸಹ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಗೈರು ಹಾಜರಾಗಿದ್ದಾರೆ. ಇದರಲ್ಲಿ ಕೆಲ ಸಿಬ್ಬಂದಿಗಳು ಅಧಿಕಾರಿಗಳ ಕರೆಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಲು ಬಂದರೂ ಅವರ ಮೇಲೆ ಅನುಚಿತ ವರ್ತನೆ, ಹಲ್ಲೆ ಮಾಡುವುದು ಮತ್ತು ಸಂಸ್ಥೆಯ ವಾಹನಗಳನ್ನು ಜಖಂಗೊಳಿಸುವ ದುಸ್ಸಾಹಸಕ್ಕೆ ಇಳಿದರು. ಇಂತಹ ಘಟನೆಗಳಿಂದ ಸಂಸ್ಥೆಯ ಜಮಖಂಡಿ ಘಟಕದ ನಿಷ್ಠಾವಂತ ಹಿರಿಯ ಚಾಲಕರಾದ ಎನ್. ಬಿ. ಅವಟಿ ರವರು ಜೀವ ಕಳೆದುಕೊಳ್ಳಬೇಕಾಯಿತು.
ಸಂಸ್ಥೆಯು ಅಗತ್ಯ ಸೇವೆಗಳ ಅಡಿಯಲ್ಲಿರುವುದರಿಂದ ಕೆಲಸವಿಲ್ಲದೇ ವೇತನವಿಲ್ಲ ಎಂಬ ಆದೇಶ, ಪತ್ರಿಕಾ ಪ್ರಕಟಣೆ, ನೋಟೀಸ್ ನೀಡಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರೂ ಸಹ ಕರ್ತವ್ಯದಿಂದ ದೂರ ಉಳಿದ ಕಾರಣ ಸಾರ್ವಜನಿಕ ಹಾಗೂ ಸಂಸ್ಥೆಯ ಹಿತದೃಷ್ಟಿಯಿಂದ ನಾಲ್ಕು ನಿಗಮ/ಸಂಸ್ಥೆಗಳಲ್ಲಿ ಅನಿವಾರ್ಯವಾಗಿ ಶಿಸ್ತಿನ ಕ್ರಮ ಜರುಗಿಸಬೇಕಾಯಿತು.
ಈ ಮಧ್ಯ ಉಚ್ಚ ನ್ಯಾಯಾಲಯವು ಸಂಸ್ಥೆಯ ಮುಷ್ಕರ ನಿರತ ಸಿಬ್ಬಂದಿಗಳಿಗೆ ಕೂಡಲೇ ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಮತ್ತು ಸಂಸ್ಥೆಗೆ ಮುಷ್ಕರ ನಿರತ ಸಿಬ್ಬಂದಿಗಳ ವರ್ಗಾವಣೆ ಮತ್ತು ಶಿಸ್ತು ಕ್ರಮ ಕುರಿತು ಕೈಗೊಂಡಿರುವ ಪ್ರಕರಣಗಳಲ್ಲಿ ಸಿಬ್ಬಂದಿ ಮನವಿಯನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ಮರುಪರಿಶೀಲಿಸುವಂತೆ ಆದೇಶಿಸಲಾಗಿತ್ತು. 365 ಚಾಲನಾ ಸಿಬ್ಬಂದಿಗಳು, 137 ತಾಂತ್ರಿಕ ಸಿಬ್ಬಂದಿಗಳು ಮತ್ತು 04 ಆಡಳಿತ ಸಿಬ್ಬಂದಿಗಳನ್ನು ವರ್ಗಾಯಿಸಿ ಆದೇಶಿಸಲಾಗಿತ್ತು. ಅದರಲ್ಲಿ ಅರ್ಹ 70 ಚಾಲನಾ ಸಿಬ್ಬಂದಿಗಳ ಮತ್ತು 45 ತಾಂತ್ರಿಕ ಸಿಬ್ಬಂದಿಗಳ ವರ್ಗಾವಣೆ ಆದೇಶಗಳನ್ನು ರದ್ದುಗೊಳಿಸಲಾಗಿದೆ.
ಸಂಸ್ಥೆಯ ಸೇವೆಯಿಂದ ಒಟ್ಟು 336 ಸಿಬ್ಬಂದಿಗಳನ್ನು ವಜಾ/ಆಯ್ಕೆ ಪಟ್ಟಿಯಿಂದ ತೆಗೆದುಹಾಕಿದ ಪ್ರಕರಣಗಳಲ್ಲಿ 257 ಸಿಬ್ಬಂದಿಗಳು ಮೇಲ್ಮನವಿ ಸಲ್ಲಿಸಿದ್ದು, ಸದ್ಯ ಉಳಿದ ವಿಷಯವು ಪರಿಶೀಲನಾ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.