ಬ್ಲಾಕ್ ಫಂಗಸ್‌ಗೆ ಕಿಮ್ಸ್‌ನಲ್ಲಿ ಸೂಕ್ತ ಶಸ್ತ್ರಚಿಕಿತ್ಸೆ

Spread the love

ಹುಬ್ಬಳ್ಳಿ; ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಂಜೀವಿಯಾಗಿದೆ. ಮಹಾಮಾರಿಯಿಂದ ವಿಶ್ವದ ವೈದ್ಯಕೀಯ ವ್ಯವಸ್ಥೆ ಕುಸಿಯುತ್ತಿದೆ. ಊಹಿಸದ ರೀತಿಯಲ್ಲಿ ಕೋವಿಡ್ ಹಬ್ಬುತ್ತಿದೆ. ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲಿ ಎಂದು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದ ಕಿಮ್ಸ್, ಕೋವಿಡ್ ಸಂದರ್ಭದಲ್ಲಿ ವೈಫಲ್ಯಕ್ಕೆ ಒಳಗಾಗದೆ, ಜನರ ನೀರಿಕ್ಷೆಗೂ ಮೀರಿ ಸೇವೆ ಒದಗಿಸುತ್ತಿದೆ. ಕೋವಿಡ್ ಮೊದಲ ಅಲೆಯನ್ನು ಕಿಮ್ಸ್ ಎದುರಿಸಿದ ರೀತಿ ರಾಜ್ಯಕ್ಕೆ ಮಾದರಿಯಾಗಿದೆ. ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಿಮ್ಸ್ ಸಂಸ್ಥೆಯ ಮೂಲ ಸೌಕರ್ಯ ಹೆಚ್ಚಿಸಿಲು ಕೈಗೊಂಡ ಪ್ರಯತ್ನ, ಫಲ ನೀಡಿದೆ. ಕೊರೊನಾ ಎರಡನೇ ಅಲೆಯಲ್ಲಿ, ಕೋವಿಡ್ ಚಿಕಿತ್ಸೆ ಒಳಗಾದ ರೋಗಿಗಳಲ್ಲಿ ಬ್ಲಾಕ್ ಫಂಗಸ್ (ಮ್ಯೂಕಸ್ ಮೈಕ್ರೋಸಿಸ್) ಕಂಡು ಬಂದು ಆತಂಕ ಮೂಡಿಸಿದೆ. ಧಾರವಾಡ, ಬೆಳಗಾವಿ, ಗದಗ, ಹಾವೇರಿ, ಬಾಗಲಕೋಟೆ, ದಾವಣಗೆರೆ, ಕಾರವಾರ ಜಿಲ್ಲೆಗಳಿಂದ ಬ್ಲಾಕ್ ಫಂಗಸ್ ರೋಗಿಗಳು ಕಿಮ್ಸ್‌ನಲ್ಲಿ ದಾಖಲಾಗಿ ಸೂಕ್ತ ಶಸ್ತ್ರಚಿಕಿತ್ಸೆ ಹಾಗೂ ಆರೈಕೆ ಪಡೆದಿದ್ದಾರೆ.

40 ರೋಗಿಗಳ ಶಸ್ತ್ರಚಿಕಿತ್ಸೆಗೆ ತಯಾರಿ
ಮೇ ತಿಂಗಳಿನಿಂದ ಬ್ಲಾಕ್ ಫಂಗಸ್ ರೋಗಿಗಳು ಕಿಮ್ಸ್‌ಗೆ ದಾಖಲಾಗುತ್ತಿದ್ದಾರೆ. ಇದುವರೆಗೆ 170 ಬ್ಲಾಕ್ ಫಂಗಸ್ ರೋಗಿಗಳಿಗೆ ಕಿಮ್ಸ್ ಚಿಕಿತ್ಸೆ ನೀಡಿದೆ. ಸದ್ಯ 135 ಸಕ್ರೀಯ ಬ್ಲಾಕ್ ಫಂಗಸ್ ಪ್ರಕರಣಗಳು ಕಿಮ್ಸ್‌ನಲ್ಲಿವೆ. ಇ.ಎನ್.ಟಿ ವಿಭಾಗದಿಂದ 106, ನೇತ್ರವಿಜ್ಞಾನ ವಿಭಾಗದಿಂದ 10 ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 40 ರೋಗಿಗಳು ಫೇಶಿಯಲ್ ಆಕ್ಸಲರಿ ಶಸ್ತ್ರಚಿಕಿತ್ಸೆಗೆ ಕಾಯುತ್ತಿದ್ದಾರೆ. ಇದುವರೆಗೆ 8 ಜನರು ಬ್ಲಾಕ್ ಫಂಗಸ್‌ನಿಂದ ಮೃತಪಟ್ಟಿದ್ದಾರೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂಟರಠಾಣಿ ಮಾಹಿತಿ ನೀಡಿದರು.
ಧಾರವಾಡ ಹೊರತು ಪಡಿಸಿ ಬೇರೆ ಜಿಲ್ಲೆಗಳ ರೋಗಿಗಳು ಸರ್ವೇ ಸಾಮಾನ್ಯವಾಗಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಾಗುತ್ತಾರೆ. ಇದರಿಂದ ತಜ್ಞ ವೈದ್ಯರ ಮೇಲೆ ಒತ್ತಡ ಹೆಚ್ಚಾಗಿದೆ‌. ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆ ಹತ್ತಿರ ಬಂದಿದ್ದು, ಅಗತ್ಯ ವೈದ್ಯರ ಕೊರತೆ ಕಿಮ್ಸ್‌ಗೆ ಕಾಡುತ್ತಿದೆ. ಇದರ ನಡುವೆಯೂ ಕೈಲಾದಷ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಸರ್ಕಾರ ಕಿಮ್ಸ್ ಅಗತ್ಯ ಸಹಕಾರ ನೀಡಿದ್ದು, ಅಂಪ್ಯೋಟೆರಿಸನ್ ಬಿ ಇಂಜೆಕ್ಷನ್ ಸೇರಿದಂತೆ ಇತರೆ ಔಷಧಗಳು ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಮಾಡುತ್ತಿದೆ. ಇ.ಎನ್.ಟಿ ವಿಭಾಗದಲ್ಲಿ 60 ಹಾಸಿಗೆಗಳ ಸೌಕರ್ಯವಿದೆ. ಹಾಗಾಗಿ ಬೇರೆ ವಿಭಾಗದ ಹಾಸಿಗೆಗನ್ನು ಬಳಸಿಕೊಂಡು ರೋಗಿಗಳ ಸೂಕ್ತ ಚಿಕಿತ್ಸೆ ಹಾಗೂ ಆರೈಕೆ ಮಾಡಲಾಗುತ್ತಿದೆ ಎಂದು ಡಾ.ರಾಮಲಿಂಗಪ್ಪ ತಿಳಿಸಿದರು.
ಬ್ಲಾಕ್ ಫಂಗಸ್ ನಿರ್ವಹಣೆಗೆ ಸಮಿತಿ
ಕಿಮ್ಸ್‌ನಲ್ಲಿ ಕೋವಿಡ್ ಚಿಕಿತ್ಸೆ ಪಡೆದು ತೆರಳಿದವರಲ್ಲಿ ಮೊದಲು ಮೂಗಿನ ತೊಂದರೆ ಕಾಣಿಸಿಕೊಂಡು, ಮೇ ತಿಂಗಳಿನಲ್ಲಿ ಆಸ್ಪತ್ರೆ ದಾಖಲಾದರು‌. ನಂತರ ಈ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಬ್ಲಾಕ್ ಫಂಗಸ್ ರೋಗಿಗಳ ನಿರ್ವಹಣೆಗಾಗಿ ಇ.ಎನ್.ಟಿ ತಜ್ಞರ ನೇತೃತ್ವದಲ್ಲಿ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಇದರೊಂದಿಗೆ ಬ್ಲಾಕ್ ಫಂಗಸ್ ಹಬ್ಬುವಿಕೆಯ ಅಧ್ಯಯನಕ್ಕಾಗಿ ಸಮಿತಿಯನ್ನು ನೇಮಿಸಲಾಗಿದೆ. ತಜ್ಞ ವೈದ್ಯರ ಸಮಿತಿ ಶೀಘ್ರವಾಗಿ ಅಧ್ಯಯನ ಕುರಿತಾದ ಮಾಹಿತಿಯನ್ನು ಪ್ರಕಟಿಸಲಿದೆ.
ಬ್ಲಾಕ್ ಫಂಗಸ್ ಕಣ್ಣು, ಮುಖ, ಬಾಯಿ ಹಾಗೂ ಮೆದುಳಿಗೆ ಹಬ್ಬುವುದರಿಂದ ಇದರ ಚಿಕಿತ್ಸೆಗೆ ವಿವಿಧ ವಿಭಾಗಗಳ ವೈದ್ಯರು ಸಮನ್ವಯದಿಂದ ಚಿಕಿತ್ಸೆ ನೀಡಬೇಕು. ಕಿಮ್ಸ್‌ನಲ್ಲಿ ಇ.ಎನ್.ಟಿ, ನೇತ್ರ ವಿಭಾಗ, ಫೇಶಿಯಲ್ ಆಕ್ಸಲರಿ, ಪ್ಲಾಸ್ಟಿಕ್ ಸರ್ಜರಿ, ಮೆಡಿಸನ್, ಅರವಳಿಕೆ ವಿಭಾಗದ ವೈದ್ಯರು ಒಟ್ಟು ತಂಡವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ‌.
ಬ್ಲಾಕ್ ಫಂಗಸ್ ಕಾಣಿಸಿಕೊಂಡ ರೋಗಗಳಲ್ಲಿ ಕಣ್ಣು ಹಾಗೂ ರಪ್ಪೆ ಊತ ಕಂಡುಬಂದು, ಕಣ್ಣಿನ ಚಲನೆಯಲ್ಲಿ ತೊಂದರೆ ಉಂಟಾಗುತ್ತದೆ. ದೃಷ್ಟಿಯು ಕಳೆದು ಹೋಗಬಹುದು. ಕಿಮ್ಸ್‌ನಲ್ಲಿ ದಾಖಲಾದ 46 ರೋಗಿಗಳಿಗೆ ದೃಷ್ಟಿದೋಷ ಕಾಣಿಕೊಂಡಿದೆ. 22 ಜನರು ಸಂಪೂರ್ಣವಾಗಿ ಕಣ್ಣು ಕಳೆದಕೊಂಡಿದ್ದಾರೆ. ಬ್ಲಾಕ್ ಫಂಗಸ್ ಕಣ್ಣಿನಿಂದ ಮೆದುಳಿಗೆ ಹರಡಿ ರೋಗಿಯ ಜೀವಕ್ಕೆ ಕುತ್ತು ಬರುವ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ನಡೆಸಿ ಕಣ್ಣನ್ನು ತಗೆಯಲಾಗುತ್ತದೆ. ತಜ್ಞ ವೈದ್ಯೆ ಡಾ.ಲಕ್ಷ್ಮೀ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾರೆ. ಬ್ಲಾಕ್ ಫಂಗಸ್ ನಿಯಂತ್ರಣಕ್ಕೆ 86 ರೋಗಿಗಳಿಗೆ ಫೆರಿಯಾ ಫೆಟಲ್ ಇಫ್ಲಿಟ್ರೇಷನ್ ಇಂಜೆಕ್ಷನ್ ನೀಡಲಾಗಿದೆ. ಇದನ್ನು ಪ್ರತಿ ರೋಗಿಗೆ ಮೂರು ಬಾರಿ ನೀಡುವುದರಿಂದ ಬ್ಲಾಕ್ ಫಂಗಸ್ ಹಬ್ಬುದು ತಡೆಯುತ್ತದೆ ಎಂದು ಉಪ ವೈದ್ಯಕೀಯ ಅಧೀಕ್ಷಕ ಹಾಗೂ ನೇತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ ದ್ಯಾಬೇರಿ ತಿಳಿಸಿದರು.

ಕಿಮ್ಸ್ ಕಾರ್ಯಕ್ಕೆ ಖಾಸಗಿ ವೈದ್ಯರ ನೆರವು
ಬ್ಲಾಕ್ ಫಂಗಸ್‌ಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತರುವ ಕಿಮ್ಸ್‌ನೊಂದಿಗೆ ಡಾ.ಮಂಜುನಾಥ ಬಿಜಾಪುರ ನೇತೃತ್ವದಲ್ಲಿ ಖಾಸಗಿ ವೈದ್ಯರ ತಂಡ ಸ್ವ ಇಚ್ಛೆಯಿಂದ ಕೈ ಜೋಡಿಸಿದೆ. 40 ಶಸ್ತ್ರಚಿಕಿತ್ಸೆಯನ್ನು ನೆಡೆಸಲು ಈ ತಂಡ ಸಿದ್ದತೆವಾಗಿದೆ. ಕಿಮ್ಸ್ ಇ.ಎನ್.ಟಿ ವಿಭಾಗದಿಂದ ಇದುವರೆಗೆ 106 ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಶಸ್ತ್ರ ಚಿಕಿತ್ಸೆಯ ಸಹಾಯಕ್ಕಾಗಿ ಸ್ಥಳೀಯ ಇ.ಎನ್.ಟಿ ವೈದ್ಯರು ಸ್ವ-ಇಚ್ಛೆಯಿಂದ ಸಹಾಯ ಮಾಡುತ್ತಿದ್ದಾರೆ.

ಸಕ್ಕರೆ ಕಾಯಿಲೆ ಇರುವರಲ್ಲಿ ಬ್ಲಾಕ್ ಫಂಗಸ್ ಹೆಚ್ಚಾಗಿ ಕಂಡುಬರುತ್ತಿದೆ. ರೋಗಿಗಳಲ್ಲಿ ಕಣ್ಣು, ಬಾಯಿ ಅಂಗಳ, ದವಡೆ ಹಾಗೂ ಹಲ್ಲಿನ ಸಡಲಿಕೆ ಲಕ್ಷಣಗಳು ಕಂಡುಬರುತ್ತಿದೆ. ಕೆಲವು ರೋಗಿಗಳಲ್ಲಿ ಮುಖದ ಚರ್ಮ ಕಪ್ಪಾಗಿ ತೊಂದರೆ ಉಂಟಾಗುತ್ತಿದೆ.
ವಯಸ್ಸಾದ, ಸಕ್ಕರೆ ಕಾಯಿಲೆ ಹಾಗೂ ಮೂತ್ರಪಿಂಡದ ತೊಂದರೆಗೆ ಇದ್ದವರು ಕಿಮ್ಸ್ ನಲ್ಲಿ ದಾಖಲಾಗಿದ್ದಾರೆ. ಇಂತಹವರಿಗೆ ಅರವಳಿಕೆ ನೀಡುವುದು ತುಂಬಾ ಕಷ್ಟ. ವೈದ್ಯರು ಇವರ ಕಾಳಜಿ ವಹಿಸಿ ಶಸ್ತ್ರಚಿಕಿತ್ಸೆ ನೆಡಸಿದ್ದಾರೆ. ಕೈಗೊಂಡ ಎಲ್ಲಾ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿವೆ. ಕಿಮ್ಸ್ ಮೇಲಿನ ಒತ್ತಡ ಕಡಿಮೆ ಮಾಡಲು ಬೇರೆ ಜಿಲ್ಲೆಯ ರೋಗಿಗಳನ್ನು ಶಸ್ತ್ರಚಿಕಿತ್ಸೆ ಬಳಿಕ ತವರು ಜಿ್ಳಲ್ಲೆಗಳಿಗೆ ಕಳುಹಿಸಿ, ಅಲ್ಲಿ ಉಳಿದ ವೈದ್ಯಕೀಯ ಹಾರೈಕೆ ಮಾಡಲು ವ್ಯವಸ್ಥೆ ಮಾಡುವಂತೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ ಎಂದು ಇ.ಎನ್.ಟಿ‌. ವಿಭಾಗದ ಮುಖ್ಯಸ್ಥ ಹಾಗೂ ಮುಖ್ಯ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಗದಗ ಮಾಹಿತಿ ನೀಡಿದರು.
ಬ್ಲಾಕ್ ಫಂಗಸ್ ತುತ್ತಾದವರು ಎದೆ ನೋವು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ರೋಗಿಗಳಲ್ಲಿ ಸಕ್ಕೆರೆ ಅಂಶ ನಿಯಂತ್ರಣ ಮಾಡುವುದು ಅವಶ್ಯವಾಗಿರುತ್ತದೆ. ಆ್ಯಂಟಿ ಫಂಗಸ್ ಔಷದಗಳನ್ನು ಬಳಸುವುದರಿಂದ ರೋಗಿಗಳ ಕಿಡ್ನಿ ಮೇಲೆ ಪ್ರಭಾವ ಬೀರುತ್ತದೆ. ಈ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿ ಶಸ್ತೃಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ರೋಗಿಗಳು ಗುಣಮುಖರಾಗುತ್ತಿದ್ದಾರೆ ಎಂದು ತಜ್ಞನ ವೈದ್ಯೆ ಹಾಗೂ ಪ್ರಾಧ್ಯಾಪಕಿ ಡಾ. ಮಾಧುರಿ ತಿಳಿಸಿದ್ದಾರೆ.
ಹುಬ್ಬಳ್ಳಿ ಆನಂದನಗರ ನಿವಾಸಿ ಮಹಮ್ಮದ್ ಜಕರಿಯಾ ಅವರಿಗೆ ಕೋವಿಡ್ ಚಿಕಿತ್ಸೆ ಪಡೆದು ಗುಣಮುಖವಾಗಿ ತೆರಳಿದ ನಂತರ ತಲೆಯಲ್ಲಿ ನೋವು ಶುರುವಾಯಿತು. ತಪಾಸಣೆ ನಡೆಸಿದಾಗ ಬ್ಲಾಕ್ ಫಂಗಸ್‌ಗೆ ತುತ್ತಾಗಿರವುದು ಪತ್ತೆಯಾಯಿತು. ಕಿಮ್ಸ್ ಇ.ಎನ್.ಟಿ ವಿಭಾಗಕ್ಕೆ ಬಂದು ದಾಖಲಾದ ಅವರಿಗೆ, ಮೇ 12 ರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶಸ್ತ್ರಚಿಕಿತ್ಸೆ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಿತ್ಯವೂ ಕಾಳಜಿಯಿಂದ ಹಾರೈಕೆ ಮಾಡುತ್ತಿರುವ ವೈದ್ಯರು ಮತ್ತು ನರ್ಸಗಳಿಗೆ ಕೃತಜ್ಞ ಭಾವದಿಂದ ಧನ್ಯವಾದ ಹೇಳುತ್ತಾರೆ.
ಕೋವಿಡ್ ಮೂರನೇ ಅಲೆ ಎದುರಿಸಲು ಕಿಮ್ಸ್ ಈಗಿನಿಂದಲೇ ಸಿದ್ದವಾಗಿದೆ. ರೋಗಿಗಳ ಪ್ರಾಣ ಉಳಿಸಲು ಹೊರಾಡುವ ಕಿಮ್ಸ್ ವೈದ್ಯರ ಅವಿರತ ಪ್ರಯತ್ನ ಶ್ಲಾಘನೀಯವಾಗಿದೆ.

ಲೇಖನ ವರದಿ : ವೇಣುಗೋಪಾಲ.ಪಿ.ಎಂ. ರಾಜ್ಯ ಸಮಾಚಾರ ಕೇಂದ್ರ

ಛಾಯಚಿತ್ರ– ವಿಜಯ ಬಾಕಳೆ


Spread the love

Leave a Reply

error: Content is protected !!