ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ 7 ತಿಂಗಳ ಹೆಣ್ಣು ಮಗುವಿಗೆ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆ
ಡಾ. ಅಜಯ್ ಹೂಲಿಮನಿ, ಕಾಶಿನಾಥ ಸೇರಿದಂತೆ ಮುಂತಾದವರು ಉಪಸ್ಥಿತಿ
ಹುಬ್ಬಳ್ಳಿ:ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ 7 ತಿಂಗಳ ಹೆಣ್ಣು ಮಗುವಿಗೆ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅಸ್ಪತ್ರೆಯ ಯಕೃತ್ತಿನ ಶಸ್ತ್ರಚಿಕಿತ್ಸಕ ಡಾ. ರಾಘವೇಂದ್ರ ಸಿ.ವಿ. ಹೇಳಿದರು.
ಅವರು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಬಾಗಲಕೋಟೆ ಜಿಲ್ಲೆಯ ಹೆಣ್ಣು ಮಗುವಿಗೆ ಹುಟ್ಟಿದ ಒಂದೂವರೆ ತಿಂಗಳಲ್ಲಿ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಅಲ್ಲಿ ಪರೀಕ್ಷೆ ಮಾಡಿದ ಬಳಿಕ ಮಗುವಿಗೆ ಜನ್ಮಜಾತ ಪಿತ್ತಜನಕಾಂಗ (ಯಕೃತ್ತು)ದ ಬಿಲಿಯರಿ ಅಟ್ರೆಸಿಯಾ ಇರುವುದು ಗೊತ್ತಾಯಿತು.
ಹುಟ್ಟುವಾಗ ಮಗುವಿನ ಪಿತ್ತ ನಾಳಗಳ ಬೆಳವಣಿಗೆಯಾಗದೇ ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಪಿತ್ತರಸ ಹೊರಗೆ ಹೋಗಲು ದಾರಿ ಇರುವುದಿಲ್ಲ. ಇದರಿಂದ ಪಿತ್ತರಸ ಯಕೃತ್ತಿನಲ್ಲಿಯೇ ಸಂಗ್ರಹವಾಗಿ ಯಕೃತ್ತು ಹಾಳಾಗುವ ಸಾಧ್ಯತೆಗಳಿರುತ್ತದೆ. ಇದಕ್ಕೆ ಸೂಕ್ತ ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ದಲ್ಲಿ ಅಂತಹ ಮಗು ಮರಣಹೊಂದುವ ಸಂಭವವವಿರುತ್ತದೆ. ಈ ರೀತಿಯ ಸಮಸ್ಯೆ 25 ಸಾವಿರ ಜನರಲ್ಲಿ ಒಬ್ಬರಿಗೆ ಕಂಡು ಬರುತ್ತದೆ ಎಂದರು.
ಮಗುವಿನಲ್ಲಿರುವ ಸಮಸ್ಯೆ ಕುರಿತು ಪಾಲಕರಿಗೆ ಮನವರಿಕೆ ಮಾಡುವ ಮೂಲಕ ಶಸ್ತ್ರಚಿಕಿತ್ಸೆ ಮಾಡಿಸುವಂತೆ ತಿಳಿಸಲಾಯಿತು. ಇದಕ್ಕೆ ಮಗುವಿನ ತಂದೆಯ ಶೇ. 20ರಷ್ಟು ಲೀವರ್ (ಯಕೃತ್ತು) ತೆಗೆದು ಮಗುವಿಗೆ ಕಸಿ ಮಾಡಲಾಗಿದೆ. ನಿರಂತರ 10ರಿಂದ 12 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇಂತಹ ಶಸ್ತ್ರಚಿಕಿತ್ಸೆಗಳಿಗೆ ₹20ರಿಂದ ₹25 ಲಕ್ಷ ವೆಚ್ಚ ತಗುಲಲಿದೆ. ಮಗುವಿನ ತಂದೆ ಬಿಪಿಎಲ್ ಕಾರ್ಡ್ ಹೊಂದಿದ್ದರಿಂದ ಸರ್ಕಾರಿ ಯೋಜನೆಯ ಅಡಿ ₹11 ಲಕ್ಷ, ದಾನಿಗಳಿಂದ ₹5.5 ಲಕ್ಷ ಹಾಗೂ ಕುಟುಂಬದವರು ₹2-3 ಲಕ್ಷ ಹೊಂದಿಸಿದ್ದರಿಂದ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ ಎಂದರು.
ಸಾಮಾನ್ಯವಾಗಿ ಬಿಪಿಎಲ್ ಕಾರ್ಡ್ ಹೊಂದಿದವರು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದಾಗಿದೆ. ಈ ಕುರಿತು ಜನರಲ್ಲಿ ಸರಿಯಾದ ಜಾಗೃತಿ ಇರದೇ ಇರುವುದರಿಂದ ಇಂತಹ ಲಕ್ಷಣಗಳು ಹೊಂದಿರುವ ಮಗುವಿಗೆ ಪಾಲಕರು ಚಿಕಿತ್ಸೆ ಕೊಡಿಸದೇ ಹಿಂದೇಟು ಹಾಕುತ್ತಿರುತ್ತಾರೆ. ಈ ಕುರಿತು ಸರಿಯಾದ ಜಾಗೃತಿಯಾಗುವ ಮೂಲಕ ಸಮಸ್ಯೆ ಹೊಂದಿದ ಬಡ ಮಕ್ಕಳು ಶಸ್ತ್ರಚಿಕಿತ್ಸೆಗೆ ಒಳಪಟ್ಟು ಗುಣಮುಖರಾಗಬಹುದಾಗಿದೆ ಎಂದರು.
ಡಾ. ಅಜಯ್ ಹೂಲಿಮನಿ, ಕಾಶಿನಾಥ ಸೇರಿದಂತೆ ಹಲವರಿದ್ದರು.