ಚಿಕ್ಕಮಗಳೂರು; ರಾಜ್ಯದಲ್ಲಿಯೇ ಪಾಸಿಟಿವಿಟಿ ದರದಲ್ಲಿ ಚಿಕ್ಕಮಗಳೂರು ಜಿಲ್ಲೆ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವುದು ಪ್ರತಿ ನಿತ್ಯ ಮೂರಂಕಿ ಯಲ್ಲಿ ಸೋಂಕು ಕಂಡುಬರುತ್ತಿರುವುದು ಒಂದೆಡೆಯಾದರೆ,ಕಳೆದ ಐದು ದಿನಗಳಿಂದ ಬಿಟ್ಟುಬಿಡದೆ ದಿನವಿಡೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಹಳ್ಳಕೊಳ್ಳ ನದಿಯಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದೆ ಅಲ್ಲದೆ ಮಳೆ ಹಾಗೂ ಗಾಳಿ ಅಬ್ಬರಕ್ಕೆ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.
ಒಟ್ಟಾರೆ ಕೊರೊನಾ ಸೋಂಕು ಹಾಗೂ ಭಾರಿ ಮಳೆಯಿಂದಾಗಿ ಮಲೆನಾಡಿಗರ ಜೀವನ ದುಸ್ತರ ಗೊಂಡಿದೆ.
ಜಿಲ್ಲೆಯ ಮಲೆನಾಡು ತಾಲೂಕುಗಳಾದ ಶೃಂಗೇರಿ, ಕೊಪ್ಪ, ಮೂಡಿಗೆರೆ, ಚಿಕ್ಕಮಗಳೂರು, ನರಸಿಂಹರಾಜಪುರದಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಹೇಮಾವತಿ, ಭದ್ರಾ ನದಿಗಳಲ್ಲಿ ನೀರಿನ ಹರಿವು ಅಧಿಕಗೊಂಡಿದೆ.
ಕೊಟ್ಟಿಗೆಹಾರದ ಹತ್ತಿ ಗಿರಿಯಲ್ಲಿ ಸುಮಾ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಕಳಸ ಸಮೀಪದ ಸಂಸೆ ಯ ರಾಮಾ ಎಂಬುವರ ಮನೆಯ ಗೋಡೆ ಕುಸಿದಿದೆ. ನೀಡುವಾಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರವೇಶದ್ವಾರದ ಮೇಲ್ಚಾವಣಿ ಮೇಲೆ ಮರ ಬಿದ್ದು ಪ್ರವೇಶದ್ವಾರ ಜಖಂಗೊಂಡಿದೆ.
ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಸತತ ಮಳೆಯಿಂದಾಗಿ ಬಣಕಲ್, ಕೊಟ್ಟಿಗೆಹಾರ, ಜಾವಳಿ, ಕೆಳಗೂರು, ಕೂವೆ, ನೀಡುವಳೆ, ಭಾರತಿ ಬೈಲ್, ಕೊಪ್ಪದ ಹಿರೇಕೊಡಿಗೆ, ಮೂಡಿಗೆರೆಯ ಹೊರಟ್ಟಿ, ಬಿದರಳ್ಳಿ, ಫಲ್ಗುಣಿ ಸೇರಿದಂತೆ ಹಲವು ಕಡೆ ವಿದ್ಯುತ್ ಕಂಬಗಳು ತುಂಡಾಗಿರುವ ರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಶೃಂಗೇರಿ ತಾಲೂಕಿನ ಕೆರೆಮನೆ ಗ್ರಾಮದ ಬಳಿ ತುಂಗಾನದಿ ಮೈದುಂಬಿಕೊಂಡು ಹರಿಯುತ್ತಿದೆ. ವಿಪರೀತ ಗಾಳಿ-ಮಳೆಯಿಂದಾಗಿ ಕೃಷಿ ಕೂಲಿ ಕಾರ್ಮಿಕರ ಕೆಲಸಕ್ಕೆ ಅಡ್ಡಿಯುಂಟಾಗಿದೆ.
ಕಳಸ ಸಮೀಪದ ಕೋಟಿತೀರ್ಥದಲ್ಲಿ ಭದ್ರಾ ನದಿಯು ತುಂಬಿ ಹರಿಯುತ್ತಿದೆ.
ಮೂಡಿಗೆರೆ ತಾಲೂಕಿನ ಬಿನ್ನಡಿ ಸಮೀಪ ಗುಡ್ಡ ಕುಸಿತ ಉಂಟಾಗಿದೆ. ಇದರಿಂದಾಗಿ ಓಡಾಡಲು ಅಡಚಣೆಯಾಗಿದೆ. ಜಾವಳಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ರಸ್ತೆಗೆ ಬಿದ್ದ ಮಣ್ಣು ಮತ್ತು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಮಳೆ ಬಿಡುವು ನೀಡದೆ ಇದ್ದರೆ ಅಪಾರ ಪ್ರಮಾಣದಲ್ಲಿ ಭೂಕುಸಿತ ಹಾಗೂ ಹಾನಿ ಉಂಟಾಗುವ ಆತಂಕ ಸೃಷ್ಟಿಯಾಗಿದೆ.
ಈ ನಡುವೆ ಬಯಲು ಭಾಗದ ಹಲವು ಪ್ರದೇಶಗಳಲ್ಲಿ ಮರು ಬಿತ್ತನೆಗೆ ರೈತರು ಮುಂದಾಗಿದ್ದಾರೆ. ಕೆಲವಡೆ ಆಲೂಗೆಡ್ಡೆ ಉತ್ತಮವಾಗಿ ಚಿಗುರೊಡೆದರೆ ಮತ್ತೆ ಕೆಲವೆಡೆ ಮೊಳಕೆ ಹೊಡೆಯುವುದು ತಡವಾಗುತ್ತಿದೆ.
ಬಯಲು ಪ್ರದೇಶಕ್ಕೆ ಮಳೆ ಹೆಚ್ಚಾಗಿರುವುದರಿಂದ ಭತ್ತದ ನಾಟಿಗೆ ನೀರು ಸಸಿ ಹಾಕಲು ಮುಂದಾಗಿದ್ದಾರೆ.
ತರೀಕೆರೆ ತಾಲೂಕಿನ ದುಗ್ಲಾಪುರ ಬಳಿ ಜಂಬದಹಳ್ಳಕ್ಕೆ ನಿರ್ಮಿಸಲಾಗಿದ್ದ ಸೇತುವೆಯ ತಡೆಗೋಡೆ ಕುಸಿದಿದೆ.
ಒಂದೆಡೆ ಮಳೆಯ ಹೊಡೆತ ಜನರು ತತ್ತರ ಗೊಂಡರೆ ಇನ್ನೊಂದೆಡೆ ಕೊರೋನಾ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇಂದು ಜಿಲ್ಲೆಯಲ್ಲಿ 254 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ 4 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 43554 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 39771 ಮಂದಿ ಗುಣಮುಖರಾಗಿದ್ದಾರೆ.3061 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಇದುವರೆಗೆ 303 ಮಂದಿ ಮೃತಪಟ್ಟಿದ್ದಾರೆ.
