ಹುಬ್ಬಳ್ಳಿ: ನಗರದ ಹೆಗ್ಗೇರಿ ಕಾಲೊನಿಯಲ್ಲಿರುವ ನಾಲೆಗೆ ಬುಧವಾರ ಕಸ ಎಸೆಯಲು ಹೋಗಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ. ಜಗದೀಶ ನಗರದ ಶಂಕರಪ್ಪ ಕಟ್ಟಿಮನಿ (45) ಮೃತ ವ್ಯಕ್ತಿಯಾಗಿದ್ದಾನೆ ಕೂಲಿ ಕಾರ್ಮಿಕರಾಗಿದ್ದ ಶಂಕರಪ್ಪ ಅವರು, ಮಧ್ಯಾಹ್ನ ಗಂಟೆ ಸುಮಾರಿಗೆ ಮನೆ ಸಮೀಪದ ರೇಣುಕಾ ದೇವಸ್ಥಾನ ಎದುರಿಗೆ ಇರುವ ನಾಲೆಗೆ ಕಸ ಎಸೆಯಲು ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಆಯತಪ್ಪಿ ನಾಲೆಗೆ ಬಿದ್ದ ಅವರು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಠಾಣೆಗೆ ಕರೆ ಮಾಡಿ ತಿಳಿಸಿದರು ಎಂದು ಪೊಲೀಸರು ಹೇಳಿದರು.
ಕೂಡಲೇ ಸ್ಥಳಕ್ಕೆ ಹೋಗಿ ಸ್ಥಳೀಯರ ನೆರವಿನಿಂದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು. 3 ಗಂಟೆ ಸುಮಾರಿಗೆ ಹೆಗ್ಗೇರಿ ಸ್ಮಶಾನದ ಬಳಿ ಇರುವ ರಸ್ತೆ ಸೇತುವೆ ಬಳಿ ಮೃತ ಸ್ಥಿತಿಯಲ್ಲಿ ಶಂಕರಪ್ಪ ಪತ್ತೆಯಾದರು. ಮಳೆಯಿಂದಾಗಿ ನಾಲೆಯಲ್ಲಿ ನೀರಿನ ಹರಿವು ಜೋರಾಗಿದ್ದರಿಂದ ಸೇತುವೆ ತನಕ ಕೊಚ್ಚಿಕೊಂಡು ಬಂದಿದ್ದರು. ಸ್ಥಳೀಯರು ಶಂಕರಪ್ಪ ಅವರನ್ನು ಗುರುತಿಸಿ ಮನೆಯವರಿಗೆ ವಿಷಯ ಮುಟ್ಟಿಸಿದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು ಎಂದು ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಶಶಿಧರ ಮಾಡ್ಯಾಳ, ‘ಶಂಕರಪ್ಪ ಅವರ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ, ಅವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು’ ಎಂದರು.
