*ಸಂಸ್ಕೃತಿ ಇಲಾಖೆಯ ಸಚಿವರಿಗೆ ಸಂಸ್ಕೃತಿಯೇ ಇಲ್ಲ: ರಾಜ್ಯ ಸರ್ಕಾರದ ಭವಿಷ್ಯ ನುಡಿದ ಟೆಂಗಿನಕಾಯಿ..!*
ಹುಬ್ಬಳ್ಳಿ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಸರಿಯಾದ ರೀತಿಯಲ್ಲಿ ಮಾತನಾಡಬೇಕು. ಆಕಾಶಕ್ಕೆ ಉಗುಳಿದರೇ ನಮ್ಮ ಮೇಲೆಯೇ ಸಿಡಿಯುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅವರು ಸಚಿವ ಶಿವರಾಜ ತಂಗಡಗಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ದೇಶದ ಬಹುದೊಡ್ಡ ನಾಯಕರ ಬಗ್ಗೆ ಹಾಗೂ ಗೌರವಾನ್ವಿತ ಪ್ರಧಾನಮಂತ್ರಿಗಳ ಬಗ್ಗೆ ಸಚಿವರು ಈ ರೀತಿಯ ಮಾತನಾಡುವುದು ಸರಿಯಲ್ಲ. ನಾಲಿಗೆಯ ಮೇಲೆ ಹಿಡಿತವಿರಬೇಕು. ಒಂದು ಸಮಾಜ ಹಾಗೂ ಸಮುದಾಯಕ್ಕೆ ಸೀಮಿತವಾದ ಪ್ರಧಾನಮಂತ್ರಿ ಅಲ್ಲ. ಅವರು ದೇಶದ ಪ್ರಧಾನಮಂತ್ರಿ ಈ ನಿಟ್ಟಿನಲ್ಲಿ ಮಾತನಾಡುವಾಗ ಸಂಸ್ಕೃತಿಯನ್ನು ಬಿಂಬಿಸುವ ರೀತಿಯಲ್ಲಿ ಮಾತನಾಡಬೇಕು ಎಂದರು.
ಕಾಂಗ್ರೆಸ್ ಆಂತರಿಕ ಅಸಮಾಧಾನದ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಚುನಾವಣೆ ನಂತರ ಬಹುದೊಡ್ಡ ಆಘಾತ ಕಾಂಗ್ರೆಸ್ ಸರ್ಕಾರಕ್ಕೆ ಕಾದಿದೆ. ಚುನಾವಣೆಗೆ ಮುನ್ನವೇ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಅಸಮಾಧಾನ ಬುಗಿಲೆದ್ದಿದ್ದು, ಚುನಾವಣೆ ನಂತರವೇ ಸರ್ಕಾರಕ್ಕೆ ಬಹುದೊಡ್ಡ ಆಘಾತ ಕಾದಿದೆ ಎಂದು ಅವರು ಹೇಳಿದರು.