ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವತಿಯಿಂದ ಧಾರವಾಡದಲ್ಲಿ ‘ಸಾಹಿತ್ಯ ಸಹವಾಸ’ ಕಾರ್ಯಕ್ರಮಕ್ಕೆ ಚಾಲನೆ

Spread the love

ಧಾರವಾಡ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ʼಸಾಹಿತ್ಯ ಸಹವಾಸʼ ಕಾರ್ಯಕ್ರಮ ಸರಣಿಗೆ ಧಾರವಾಡದಲ್ಲಿ ಮಾರ್ಚ್‌ 24, 2024ರಂದು ಚಾಲನೆ ನೀಡುತ್ತಿದೆ. ಇದು ರಾಜ್ಯದ ಸಾಂಸ್ಕೃತಿಕ ಪರಂಪರೆ, ಕನ್ನಡದ ಪ್ರಮುಖ ಸಾಹಿತಿಗಳು, ಮತ್ತು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸಂಭ್ರಮಿಸಲು ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಸರಣಿಯಲ್ಲಿ ಮೊದಲನೆಯದಾಗಿದೆ.
ಧಾರವಾಡದ ಕಾರ್ಯಕ್ರಮವನ್ನು ಕನ್ನಡದ ವರಕವಿ ದ. ರಾ. ಬೇಂದ್ರೆ ಮತ್ತು ಕನ್ನಡ ಭಾಷೆಯ ಸವಾಲು ಮತ್ತು ಸಾಧ್ಯತೆಗಳನ್ನು ಕುರಿತು ಅನಂತಮೂರ್ತಿಯವರು ನೀಡಿರುವ ಎರಡು ಉಪನ್ಯಾಸಗಳ ಸುತ್ತ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ, ಅನಂತಮೂರ್ತಿಯವರ ವಿದ್ವತ್ಪೂರ್ಣ ಸರಣಿ ಉಪನ್ಯಾಸಗಳನ್ನು ವಿಶ್ವದೆಲ್ಲೆಡೆ ಇರುವ ಸಾಹಿತ್ಯದ ಆಸಕ್ತರಿಗೆ ದೊರೆಯುವಂತೆ ಮಾಡಲು, ಇಂಗ್ಲಿಷ್‌ ಉಪಶೀರ್ಷಿಕೆಗಳೊಂದಿಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಯೂಟ್ಯೂಬ್ ವಾಹಿನಿಯ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಈ ಉಪನ್ಯಾಸ ಸರಣಿಯು ಹಿಂದೆ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗಿತ್ತು.
ಈ ಉಪನ್ಯಾಸ ಸರಣಿಯು ಇಪ್ಪತ್ತನೇ ಶತಮಾನದ ಕನ್ನಡದ ಪ್ರಮುಖ ಬರಹಗಾರರಾದ ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಗೋಪಾಲಕೃಷ್ಣ ಅಡಿಗ, ಪಿ. ಲಂಕೇಶ್‌, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಎ.ಕೆ. ರಾಮಾನುಜನ್‌ ಮತ್ತು ಗಿರೀಶ್‌ ಕಾರ್ನಾಡ್‌ ಅವರ ಕೊಡುಗೆಗಳು ಹಾಗೂ ನವ್ಯ, ದಲಿತ ಮುಂತಾದ ಪ್ರಮುಖ ಸಾಹಿತ್ಯಕ ಚಳುವಳಿಗಳ ಮೇಲೆ ಬೆಳಕು ಚೆಲ್ಲುತ್ತವೆ.
ಹುಬ್ಬಳ್ಳಿಯ ಬೇಂದ್ರೆ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಕೆ. ಎಸ್‌. ಶರ್ಮಾರವರು ಬೇಂದ್ರೆ ಮತ್ತು ಅನಂತಮೂರ್ತಿಯವರ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಈ ವಿಡಿಯೊ ಸರಣಿಯನ್ನು ಬಿಡುಗಡೆ ಮಾಡಲಿದ್ದಾರೆ. ಹೆಸರಾಂತ ಸಾಹಿತಿಗಳಾದ ವಿವೇಕ ಶಾನಭಾಗ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ದಿನದ ಕಾರ್ಯಕ್ರಮದಲ್ಲಿ ವಿದ್ವತ್‌ ಗೋಷ್ಠಿಗಳು, ಬೇಂದ್ರೆಯವರ ಕವಿತೆಗಳ ವಾಚನ ಮತ್ತು ಗಾಯನ, ಬೇಂದ್ರೆಯವರ ಒಡನಾಡಿಗಳ ನೆನಪುಗಳ ಹಂಚಿಕೆ, ಪ್ರಮುಖ ಸಾಹಿತಿಗಳ ಕಲಾಕೃತಿಗಳ ಪ್ರದರ್ಶನವೂ ಸೇರಿದಂತೆ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
2001ರಲ್ಲಿ ಪ್ರಾರಂಭವಾದ ಅಜೀಂ ಪ್ರೇಮ್‌ಜಿ ಫೌಂಡೇಷನ್‌, ಸಾಮಾಜಿಕ ವಲಯಕ್ಕೆ ಅಗತ್ಯವಾದ ಸಾಮರ್ಥ್ಯಾಭಿವೃದ್ಧಿ ಮತ್ತು ಸಂಶೋಧನೆಗೆ ಕೊಡುಗೆ ನೀಡುವ ವಿಶ್ವವಿದ್ಯಾಲಯಗಳ ಸಮೂಹವನ್ನು ನಿರ್ಮಿಸುವುದರ ಜೊತೆಗೆ ಸಮತೆ ಮತ್ತು ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಮಾದರಿಯೊಂದನ್ನು ರೂಪಿಸುವ ಕಾರ್ಯದಲ್ಲಿ ತೊಡಗಿದೆ.
ಬೆಂಗಳೂರಿನಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ವಾರ್ಷಿಕ ಮಕ್ಕಳ ಸಾಹಿತ್ಯೋತ್ಸವ ‘ಕಥಾವನ’, ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳ ಮುಕ್ತ ಆನ್ಲೈನ್ ಕಣಜ ‘ಅನುವಾದ ಸಂಪದ’, ರೇಡಿಯೊ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ವತಿಯಿಂದ ಕರ್ನಾಟಕದ ಏಳ್ಗೆಗೆ ಮಹತ್ತರ ಪಾತ್ರ ವಹಿಸಿರುವ ವಿದ್ಯಮಾನ, ಸ್ಥಳ ಮತ್ತು ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ‘ನೂರಕ್ಕೆ ನೂರು ಕರ್ನಾಟಕ’ ಕಾರ್ಯಕ್ರಮದ ಪ್ರಸಾರ, ಮುಂತಾದ ಕನ್ನಡ ಉಪಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ರಂಗಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಹೆಚ್ಚಿನ ಕೊಡುಗೆ ನೀಡುವ ಗುರಿ ಹೊಂದಿದ್ದು, ಸರಣಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸಲು ಉದ್ದೇಶಿಸಿದೆ. ಪ್ರಸ್ತುತ ಕಾರ್ಯಕ್ರಮವು ʼಸಾಹಿತ್ಯ ಸಹವಾಸʼ ಸರಣಿಯ ಆರಂಭಿಕ ಕಾರ್ಯಕ್ರಮವಾಗಿದೆ.


Spread the love

Leave a Reply

error: Content is protected !!