ಬೇಸರತ್ ಕ್ಷೇಮೆ ಕೋರಲು ರೈಲ್ವೆ ಅಧಿಕಾರಿಗೆ ಆದೇಶ
ಹುಬ್ಬಳ್ಳಿ: ನಾಲ್ಕು ಗಂಟೆಗಳ ಕಾಲ ರೈಲು ವಿಳಂಬದಿಂದ ಉಂಟಾದ ತೊಂದರೆ ಹಿನ್ನೆಲೆಯಲ್ಲಿ ಗ್ರಾಹಕನ ಬಳಿ ಕ್ಷಮೆ ಕೋರುವಂತೆ ಜಿಲ್ಲಾ ಗ್ರಾಹಕರ ಆಯೋಗ ರೈಲ್ವೆ ಅಧಿಕಾರಿಗೆ ಸೂಚಿಸಿದೆ.
ಧಾರವಾಡ ನಗರದ ಮಾಳಮಡ್ಡಿ ನಿವಾಸಿ ಪ್ರಕಾಶ ಉಪ್ಪಾರ
ಅವರು ಜರ್ಮನಿಯಲ್ಲಿ ನೆಲೆಸಿದ್ದು, ತಮ್ಮ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು.
ಮದುವೆ ಮುಗಿದ ನಂತರ ಜರ್ಮನಿಗೆ ಮರಳಲು ಮುಂಬೈನಿಂದ ವಿಮಾನಯಾನ. ನವಂಬರ್ 28,2022 ರಂದು ನಿಗದಿಯಾಗಿತ್ತು. ಧಾರವಾಡದಿಂದ ಮುಂಬೈ ತಲುಪಲು ರೈಲು ನಂ.17317ರಲ್ಲಿ 3ನೇ ಎಸಿ ಬುಕ್ ಮಾಡಿಸಿದ್ದರು. ಆದರೆ ರೈಲು ನಿಗದಿತ ವೇಳೆಗಿಂತ 4 ಗಂಟೆ ತಡವಾಗಿ ದಾದರ್ ರೇಲ್ವೆ ಸ್ಟೇಶನ್ ತಲುಪಿತ್ತು.
ಇದರಿಂದ ದೂರುದಾರರಿಗೆ ವಿಮಾನ ನಿಲ್ದಾಣದ ಒಳಗಡೆ ಹೋಗಲು ಅನಾನುಕೂಲ ಜತೆಗೆ ಮಾನಸಿಕ ಕಿರಿಕಿರಿ ಉಂಟಾಗಿತ್ತು. ಕೊನೆಗೆ ವಿಮಾನ ಹೊರಡುವ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗಳನ್ನು ವಿನಂತಿಸಿದ ದೂರುದಾರ ಜರ್ಮನಿಗೆ ತನ್ನ ಪ್ರಯಾಣ ಬೆಳೆಸಿದ್ದರು. ದೂರುದಾರನಿಗೆ ಲಗೇಜುಗಳನ್ನು ಆತ ಜರ್ಮನಿ ತಲುಪಿದ 2 ದಿನಗಳ ನಂತರ ತಡವಾಗಿ ಬೇರೆ ವಿಮಾನ ಮೂಲಕ ಕಳುಹಿಸಿ ಕೊಟ್ಟಿದ್ದರು.
ರೇಲ್ವೆ ಇಲಾಖೆಯವರ ಈ ರೀತಿಯ ವಿಳಂಬ ಧೋರಣೆಯಿಂದ ತಾನು ಮಾನಸಿಕ ಕಿರಿಕಿರಿ ಅನುಭವಿಸು ವಂತಾಯಿತು. ಕಾರಣ ರೇಲ್ವೆ ಇಲಾಖೆಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಆಗುತ್ತದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಏಪ್ರಿಲ್ 26, 2023 ರಂದು ಈ ದೂರನ್ನು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಸಲ್ಲಿಸಲಾಗಿತ್ತು.
ದೂರಿಗೆ ಆಕ್ಷೇಪಣೆ ಸಲ್ಲಿಸಿದ ರೆಲ್ವೆ ಇಲಾಖೆ, ದೇಶದಲ್ಲಿ ಸಂಚರಿಸುವ ಯಾವುದೇ ರೈಲುಗಳ ಆಗಮನ-ನಿರ್ಗಮನದ ಗ್ಯಾರಂಟಿ ಕೊಡಲ್ಲ. ಇದಲ್ಲದೇ ರೇಲ್ವೆ ಇಲಾಖೆ ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರದ ಮಧ್ಯೆ ಯಾವುದೇ ಒಪ್ಪಂದ ಇರಲ್ಲ. ಅಷ್ಟಕ್ಕೂ ದೂರುದಾರ ಸಂಚರಿಸುತ್ತಿದ್ದ ರೈಲು ನಂ.17317 ತಾಂತ್ರಿಕ ಕಾರಣಗಳಿಂದ 4 ಗಂಟೆ ವಿಳಂಬವಾಗಿ ಮುಂಬೈ ತಲುಪಿತ್ತು. ಅದರಲ್ಲಿ ರೇಲ್ವೆ ಇಲಾಖೆ ಯಾವುದೇ ಸೇವಾ ನ್ಯೂನತೆ ಎಸಗಿರುವುದಿಲ್ಲ ಎಂದು ವಾದ ಮಂಡಿಸಿತ್ತು. ಈ ದೂರು- ಆಕ್ಷೇಪಣೆ ವಿಚಾರಣೆ ಕೈಗೊಂಡ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಒಳಗೊಂಡ ಆಯೋಗ, ರೈಲು
ನಿಗದಿತ ವೇಳೆಗೆ ಮುಂಬೈ ತಲುಪದೇ ಇದ್ದರೂ ಸಹ ದೂರುದಾರ ತಾನು ಪ್ರಯಾಣಿಸುವ ವಿಮಾನ ಮೂಲಕ ವಿದೇಶ ಪ್ರಯಾಣ ಬೆಳೆಸುವಲ್ಲಿ ಸಫಲನಾಗಿದ್ದಾನೆ.
ಆದರೆ ರೈಲು ವಿಳಂಬದಿಂದ ಆತ ವಿಮಾನ ನಿಲ್ದಾಣ ತಲುಪಲು ಅನಾನುಕೂಲ, ಮಾನಸಿಕ ಯಾತನೆ ಅನುಭವಿಸಿದ್ದರೂ ಎದುರುದಾರರು ಸೇವಾ ನ್ಯೂನತೆ ಎಸಗಿದ್ದಾರೆ ಅನ್ನುವುದನ್ನು ಒಪ್ಪಲಾಗಲ್ಲ ಎಂದು ಹೇಳಿದೆ. ಈ ಅಭಿಪ್ರಾಯಪಟ್ಟು ದೂರುದಾರನ ದೂರನ್ನು ವಜಾಗೊಳಿಸಿ ಆದೇಶ ನೀಡಿರುವುದರ ಜತೆಗೆ ರೈಲು ವಿಳಂಬಕ್ಕಾಗಿ ಸಂಬಂಧಿಸಿದ ರೇಲ್ವೆ ಅಧಿಕಾರಿಗೆ ದೂರುದಾರನಿಗೆ ಕ್ಷಮೆಯಾಚಿಸಲು ಗ್ರಾಹಕನ ಬಳಿ ಕ್ಷಮೆ ಕೋರುವಂತೆ ಜಿಲ್ಲಾ ಗ್ರಾಹಕರ ಆಯೋಗ ರೈಲ್ವೆ ಅಧಿಕಾರಿಗೆ ನಿರ್ದೇಶನ ನೀಡಿದೆ.