ಶಂಕುಸ್ಥಾಪನೆ ಸಮಾರಂಭದಿಂದ ನಿರ್ಗಮಿಸಿದ ಸಚಿವ ಲಾಡ್, ಜೋಶಿ ಶಂಕು ಸ್ಥಾಪನೆ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಹೋರ್ಡಿಂಗ್ ನಲ್ಲಿ ಹಾಕದ ಕಾರಣ ಮುನಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹು-ಧಾ ಮಹಾನಗರ ಪಾಲಿಕೆ ನೂತನ ಕಟ್ಟಡ ಶಂಕುಸ್ಥಾಪನೆ ಸಮಾರಂಭದಿಂದ ನಿರ್ಗಮಿಸಿದ ಘಟನೆ ಭಾನುವಾರ ನಡೆದಿದೆ.
ಪಾಲಿಕೆ ಆಯೋಜಿಸಿದ್ದ ವೇದಿಕ ಬಳಿ ಅಳವಡಿಸಿದ್ದ ಬ್ಯಾನರ್ ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂತೋಷ ಲಾಡ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಚಿತ್ರಗಳ ಹಾಕಲಾಗಿತ್ತು. ಆದರೆ ಸಿದ್ದರಾಮಯ್ಯ ಅವರ ಚಿತ್ರ ಕೈಬಿಟ್ಟಿದ್ದರಿಂದ ಮುನಿಸಿಕೊಂಡ ಲಾಡ್ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಅವರ ತರಾಟೆಗೆ ತೆಗೆದುಕೊಂಡರು. ಆ ಸ್ಥಳದಲ್ಲಿ ಒಂದು ಕ್ಷಣವೂ ನಿಲ್ಲದೆ ನಿರ್ಗಮಿಸಲು ಮುಂದಾದರು.
ಆಗ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಮೇಯರ್ ವೀಣಾ ಬರದ್ವಾಡ್, ಹಿರಿಯ ಸದಸ್ಯ ವೀರಣ್ಣ ಸವಡಿ ತಡೆಯಲು ನಡೆಸಿದ ಪ್ರಯತ್ನ ಸಫಲವಾಗಲಿಲ್ಲ. ಸಮಾರಂಭಕ್ಕೆ ಬಂದಿದ್ದ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲಾ ಅವರನ್ನು ಹಿಂಬಾಲಿಸಿದರು.
ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಸಚಿವ ಸಂತೋಷ ಲಾಡ್, ಬ್ಯಾನರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರ ಹಾಕದಿರುವುದು ಸರಿಯಲ್ಲ. ಸರ್ಕಾರ ಅನುಮತಿ ಪಡೆಯದೆ ಪಾಲಿಕೆ ಆವರಣದಲ್ಲಿ ಇದ್ದ ಕಟ್ಟಡ ತೆರವು ಗೊಳಿಸಲಾಗಿದೆ. ಹಾಗಾಗಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದರು.
ಸಾಮಾನ್ಯ ಸಭೆಯಲ್ಲಿ ಕಟ್ಟಡ ತೆರವಿಗೆ ಒಪ್ಪಿಗೆ ಪಡೆದು ಠರಾವು ಪಾಸ್ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದರು. ಪಾಲಿಕೆಯ ಸಾಮಾನ್ಯ ಸಭೆಯ ನಡಾವಳಿ (ಠರಾವು)ಯನ್ನು ಗೌರವಿಸುತ್ತೇನೆ. ಆದರೆ, ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು. ಇದನ್ನು ಪಾಲಿಕೆ ಆಯುಕ್ತ ಸಮಜಾಯಿಷಿ ಉತ್ತರ ನೀಡಲು ಮುಂದಾದಾಗ ಲಾಡ್ ಕಾರ್ ಏರಿ ಹೋರಟು ಹೋದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಂಕು ಸ್ಥಾಪನೆ ನೆರವೇರಿಸಿದರು. ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಉಪ ಮೇಯರ್ ಸತೀಶ ಹಾನಗಲ್, ಸಭಾನಾಯಕ ಶಿವು ಹಿರೇಮಠ, ಪಾಲಿಕೆಯ ಬಿಜೆಪಿ ಸದಸ್ಯರು ಪಾಲ್ಗೊಂಡಿದ್ದರು.
ಕ್ಷುಲ್ಲಕ ಕಾರಣಕೇಂದ್ರ ಸರ್ಕಾರದ ಜಲ ಜೀವನ ಮಿಷನ್‌ನ ಎಷ್ಟೋ ಕಾರ್ಯಕ್ರಮಗಳಲ್ಲಿ ರಾಜ್ಯ ಸರ್ಕಾರದವರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸುವುದಿಲ್ಲ. ಜತೆಗೆ ಎಲ್ಲಿಯೂ ಪ್ರಧಾನಿಯವರ ಹೆಸರನ್ನು ಉಲ್ಲೇಖಿಸುವುದಿಲ್ಲ. ಆದರೆ, ನಾವು ಎಲ್ಲಿಯೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದೀಗ ಸಚಿವ ಲಾಡ್ ಅವರು ಕ್ಷುಲ್ಲಕ ಕಾರಣದಿಂದ ಪಾಲಿಕೆ ಸಭಾಭವನ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಬಿಟ್ಟು ಹೋಗಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು.