ಗಣಿ ಮಾತ್ರವಲ್ಲ, ಶಿಕ್ಷಣಕ್ಕೂ ಪೂರಕ ವಾತಾವರಣ ನಿರ್ಮಿಸಿದೆ ಕೇಂದ್ರ ಗಣಿ ಸಚಿವಾಲಯ: ಸಚಿವ ಪ್ರಹ್ಲಾದ ಜೋಶಿ
ನವಲಗುಂದ ತಾಲೂಕಿನಲ್ಲಿ ಸಿಎಸ್ ಆರ್ ಯೋಜನೆಯಡಿ ನಿರ್ಮಿಸಿದ ವಿವಿಧ ಶಾಲಾ ಕೊಠಡಿ ಉದ್ಘಾಟನೆ
ಹುಬ್ಬಳ್ಳಿ: ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯ ಗಣಿ ಮಾತ್ರವಲ್ಲದೆ, ಶಿಕ್ಷಣಕ್ಕೂ ಪೂರಕವಾಗಿ ಮೂಲ ಸೌಲಭ್ಯ ಕಲ್ಪಿಸುತ್ತಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನವಲಗುಂದ ತಾಲೂಕಿನ ವಿವಿಧೆಡೆ ಇಂದು ಸಿಎಸ್ ಆರ್ ಯೋಜನೆಯಡಿ ನಿರ್ಮಿಸಿದ ಶಾಲಾ ಕೊಠಡಿ ಉದ್ಘಾಟನೆ ಮತ್ತು ಬೋರ್ಡ್, ಡೆಸ್ಕ್, ಬೆಂಚ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಪೂರಕವಾದ ವಾತಾವರಣವನ್ನೂ ಗಣಿ ಸಚಿವಾಲಯ ಕಲ್ಪಿಸಿದೆ. ಕೋಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ CSR ಯೋಜನೆಯಡಿ ಈಗಾಗಲೇ ಜಿಲ್ಲಾದ್ಯಂತ ನೂರಾರು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯಲ್ಲಿ ನಿರ್ಮಿಸಿದ 5 ಶಾಲಾ ಕೊಠಡಿ ಹಾಗೂ ತಿರ್ಲಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 36 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ 2 ಕೊಠಡಿಗಳನ್ನು ಸಚಿವರು ಉದ್ಘಾಟಿಸಿ ಸೇವೆಗೆ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ನರಗುಂದ-ಅಳಗವಾಡಿ-ತಿರ್ಲಾಪೂರ-ಬ್ಯಾಹಟ್ಟಿ-ಕುಸುಗಲ್ ಮೇಲ್ದರ್ಜೆಗೇರಿಸಿದ ರಾಜ್ಯ ಹೆದ್ದಾರಿ ರಸ್ತೆಯ 16ನೇ ಕಿ.ಮೀ. ಇಂದ 18ನೇ ಕಿ.ಮೀ.ವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಸಚಿವ ಜೋಶಿ ಭೂಮಿಪೂಜೆ ನೆರವೇರಿಸಿದರು.
ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎನ್.ಎಚ್.ಕೋನರಡ್ಡಿ, ಮಾಜಿ ಶಾಸಕ ಆರ್.ಬಿ. ಶಿರಿಯಣ್ಣನವರ, ಪಕ್ಷದ ಪ್ರಮುಖರಾದ ಬಸವರಾಜ ಕುಂದಗೋಳಮಠ, ಷಣ್ಮುಖ ಗುರಿಕಾರ, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯರು ಉಪಸ್ಥಿತರಿದ್ದರು.