ಗೋಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು…… ಮೇವು, ಜಾನುವಾರುಗಳ ಬಗ್ಗೆ ಮಾಹಿತಿ ಪಡೆದ ಡಿಸಿ.
ಧಾರವಾಡ: ಇಡೀ ರಾಜ್ಯದಲ್ಲಿ ತೀವ್ರತರವಾದ ಬರಗಾಲ ಆವರಿಸಿದೆ. ಸದ್ಯ ಬೇಸಿಗೆ ಆರಂಭವಾಗುತ್ತಿರುವುದರಿಂದ ರೈತರು ಮೇವಿಗಾಗಿ ಪರದಾಡುವಂತಾಗಿದೆ. ಹಿಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮೇವು ದಾಸ್ತಾನು ಇದೆ. ಮೇವಿನ ತೊಂದರೆ ಉಂಟಾಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಈಗ ಮುಂದಾಗಿದೆ.
ಈ ನಿಟ್ಟಿನಲ್ಲಿಂದು ಧಾರವಾಡ ತಾಲೂಕಿನ ಮಾದನಭಾವಿ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಗೋಶಾಲೆಯಲ್ಲಿರುವ ಜಾನುವಾರುಗಳು ಮತ್ತು ಮೇವಿನ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಮಾದನಭಾವಿ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆ 100 ಜಾನುವಾರುಗಳನ್ನು ಜೋಪಾನ ಮಾಡುವಷ್ಟು ಸಾಮರ್ಥ್ಯ ಹೊಂದಿದೆ. ಆದರೆ, ವಿಶಾಲವಾದ ಜಾಗ ಹೊಂದಿರುವ ಈ ಗೋಶಾಲೆಯಲ್ಲಿ 500ರವರೆಗೂ ಜಾನುವಾರುಗಳನ್ನು ಜೋಪಾನ ಮಾಡಬಹುದಾಗಿದೆ. ಮೇವಿನ ಕೊರತೆಯುಂಟಾದಲ್ಲಿ ಈ ಗೋಶಾಲೆ ರೈತರಿಗೆ ಅನುಕೂಲವಾಗಲಿದೆ. ಧಾರವಾಡ ಜಿಲ್ಲೆಯಲ್ಲಿ 12 ವಾರಕ್ಕಾಗುವಷ್ಟು ಮೇವು ದಾಸ್ತಾನು ಇದ್ದು, ಶೀಘ್ರವಾಗಿ ಹುಬ್ಬಳ್ಳಿ ತಾಲೂಕಿನ ಶೆರೆವಾಡ ಮತ್ತು ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್ ತೆರೆಯಲಾಗುತ್ತದೆ. ಜಿಲ್ಲೆಯ 14 ಕಡೆಗಳಲ್ಲಿ ಖಾಸಗಿ ಗೋಶಾಲೆಗಳಿದ್ದು, ಅಲ್ಲಿಯೂ ಜಾನುವಾರುಗಳಿವೆ. ಆ ಗೋಶಾಲೆಗಳಿಗೂ ಸರ್ಕಾರದ ವತಿಯಿಂದ ಮೇವು ನೀಡುವ ಬಗ್ಗೆ ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಇದೇ ಮಾಹಿತಿ ನೀಡಿದರು. ಜೊತೆಗೆ ಸ್ಥಳೀಯ ಅಧಿಕಾರಿಗಳಿಂದ ನೀರು ಹಾಗೂ ಜಾನುವಾರುಗಳ ಬಗ್ಗೆ ಮಾಹಿತಿ ಪಡೆದು, ಮುಂದೆಯೂ ಮೇವಿನ ತೊಂದರೆಯುಂಟಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಡಿಸಿ ಸೂಚನೆ ನೀಡಿದ್ದಾರೆ.