ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಬರಹ ಬದಲಾವಣ ಸರ್ಕಾರದ ಮುಠ್ಠಾಳತನ- ಜೋಶಿ
ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂತೋಷ ಲಾಡ್ ಅವರನ್ನು ಮಂತ್ರಿ ಮಾಡಿದ್ದಾರೆ. ಹೀಗಾಗಿ ಲಾಡ್ ಕೂಡ ರಾಹುಲ್ ಗಾಂಧಿ ಅವರಂತೆಯೇ ಅಪ್ರಬುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯಾ ಶ್ರೀರಾಮ ಮಂದಿರ ಸರಿಯಾದ ಜಾಗೆಯಲ್ಲಿ ನಿರ್ಮಾಣವಾಗಿಲ್ಲ ಎಂದು ಲಾಡ್ ಹೇಳಿಕೆಗೆ ತಿರುಗೇಟು ನೀಡಿದರು. ಮೊದಲು ರಾಮ ಮಂದಿರ ನಿರ್ಮಾಣ ಬೇಡ ಎಂದಿದ್ದರು. ಬಳಿಕ ನಾವೂ ರಾಮ ಭಕ್ತರು ಎಂದರು. ಈಗ ಜಾಗೆಯ ಬಗ್ಗೆ ಮಾತನಾಡುತ್ತಿದ್ದಾರೆ. ಮಂದಿರ ನಿರ್ಮಣದಿಂದ ಬಡತನ ನಿರ್ಮೂಲನೆ ಆಗುತ್ತದೆಯೇ ಎಂದು ಅಪ್ರಬುದ್ಧ ಹೇಳಿಕೆ ನೀಡುವ ಲಾಡ್, ಮಸಿದಿ ಹಾಗೂ ಚರ್ಚ್ ನಿರ್ಮಾಣ ಮಾಡಿದರೆ ಬಡತನ ನಿರ್ಮೂಲನೆ ಆಗುತ್ತಾ ಎಂದು ಸ್ಪಷ್ಟಪಡಿಸಲಿ. ಸಿದ್ದರಾಮಯ್ಯ ಒಂದು ಕಡೆ ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ. ಅಲ್ಲಿ ಬಡತನ ನಿರ್ಮೂಲನೆ ಆಗಿದೆಯೇ ಎಂದು ಪ್ರಶ್ನಿಸಿದರು.
ನೂತನವಾಗಿ ನಿರ್ಮಾಣವಾದ ಮಂದಿರದ ಸ್ಥಳದಲ್ಲೇ ಹಳೇ ರಾಮ ಮಂದಿರ ಇತ್ತು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಈಗ ರಾಮ ಮಂದಿರ ನಿರ್ಮಾಣವಾಗಿದ್ದರಿಂದ ಇವರಲ್ಲಿ ಹೊಟ್ಟೆ ಉರಿ ಬಿದ್ದಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಹಾಗೂ ಲಾಡ್ ಅವರನ್ನು ನೋಡಿ ಬಹಳ ಜನರ ತಲೆ ಕೆಟ್ಟಿದೆ. ಹೀಗಾಗಿ ಬಹಳ ಜನ ಕಾಂಗ್ರೆಸ್ ತೊರೆಯುತ್ತಿದ್ದಾರೆ ಎಂದರು.
`ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಬರಹ ಬದಲಾವಣೆ ವಿಚಾರವಾಗಿ ಮಾತನಾಡಿ, ಇದು ಸರ್ಕಾರದ ಮುಠ್ಠಾಳತನದ ವರ್ತನೆ. ತುಷ್ಠೀಕರಣ ಪರಮಾವಧಿ. ರಾಷ್ಟç ಕವಿ ಕುವೆಂಪು ಅವರಿಗೆ ಮಾಡಿರುವ ಅಪಮಾನ ಎಂದು ಗುಡುಗಿದರು. ಅಲ್ಲದೆ, ಹಳೇ ಹುಬ್ಬಳ್ಳಿ ಗಲಭೆ ಕೋರರು ಅಮಾಯಕರಲ್ಲ. ನ್ಯಾಯಾಲಯದಲ್ಲಿ ಸರ್ಕಾರ ಸರಿಯಾಗಿ ವಾದ ಮಂಡಿಸಿಲ್ಲ. ತನ್ಮೂಲಕ ಪರೋಕ್ಷವಾಗಿ ಜಾಮೀನಿಗೆ ಸರ್ಕಾರ ಸಹಕಾರ ನೀಡಿದೆ. ಮುಂದೆ ಇಂತಹ ಘಟನೆ ನಡೆದಾಗ ಅವರಿಗೆ ಗೊತ್ತಾಗುತ್ತದೆ ಎಂದರು.