ತುರುಸಿನಿಂದ ನಡೆದ ಅಂಜುಮನ್ ಸಂಸ್ಥೆ ಚುನಾವಣೆ
ಹುಬ್ಬಳ್ಳಿ, ಫೆ 18: ಬಹು ಕುತೂಹಲ ಕೆರಳಿಸಿರುವ ಹುಬ್ಬಳ್ಳಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ಇಂದು ತುರುಸಿನಿಂದ ನಡೆಯಿತು.
ನಗರದ ಘಂಟಿಕೇರಿಯ ಸರ್ಕಾರಿ ಪೌಢಶಾಲೆ ಮತ್ತು ನೆಹರೂ ಕಾಲೇಜಿನಲ್ಲಿ ಸ್ಥಾಪಿತ ಮತಗಟ್ಟೆಗಳಿಗೆ ಮತದಾರರು ಬಹು ಹುರುಪಿನಿಂದ ಆಗಮಿಸಿ ಮತ ಚಲಾಯಿಸಿದರು.
ಬೆಳಿಗ್ಗೆ 8 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಸಂಸ್ಥೆಯ ಆಡಳಿತ ಮಂಡಳಿಗೆ ಒಟ್ಟು 52 ಮಂದಿ ಆಯ್ಕೆ ನಡೆಯಲಿದೆ.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಬಣ, ಯೂಸುಫ್ ಸವಣೂರ ಬಣ, ಮಜರ್ ಖಾನ್ ಬಣ ಹಾಗೂ ಎನ್.ಡಿ. ಗದಗಕರ ಬಣ ಸ್ಪರ್ಧಾಕಣದಲ್ಲಿವೆ. ಪ್ರತಿ ಬಣದಿಂದ 52 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 211 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಸಂಸ್ಥೆಯ ಆಡಳಿತ ಮಂಡಳಿಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿ, ಏಳು ಶಿಕ್ಷಣ ಮಂಡಳಿ ಸದಸ್ಯರು, ನಾಲ್ಕು ಆಸ್ಪತ್ರೆ ಮಂಡಳಿ ಸದಸ್ಯರು, 10 ಪೆÇೀಷಕ ಸದಸ್ಯರು ಹಾಗೂ 25 ಸಾಮಾನ್ಯ ಸದಸ್ಯರೆಂದು ಒಟ್ಟು 52 ಮಂದಿ ಆಯ್ಕೆ ನಡೆಯಲಿದೆ. ಯಾವ ಬಣ ಗೆಲುವು ಸಾಧಿಸಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿಂದು ಮತದಾನ ಕೇಂದ್ರಗಳಾದ ಘಂಟಿಕೇರಿ ಸರ್ಕಾರಿ ಪ್ರೌಢಶಾಲೆ ಹಾಗೂ ನೆಹರೂ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಈ ಎರೆಡೂ ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.