ಓಲೈಕೆ ಬಜೆಟ್ ಆಗಿದ್ದರೆ ಸಾಬೀತುಪಡಿಸಲಿ-ಸಚಿವ ಶಿವಾನಂದ ಪಾಟೀಲ್ ಸವಾಲು
ಹುಬ್ಬಳ್ಳಿ: ಬಿಜೆಪಿ ನಾಯಕರು ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಬಜೆಟ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಸಭಾತ್ಯಾಗ ಮಾಡಿ ಪ್ರತಿಭಟನೆ ಮಾಡಿರುವುದು ಪೂರ್ವ ನಿಯೋಜಿತ ಎಂದು ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೇ ನಾಡಿನ ಜನತೆಗೆ 3,68,674 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದಾರೆ. ಆದರೂ ವಿಪಕ್ಷಗಳು ಟೀಕೆ ಮಾಡುವುದನ್ನು ನಿಲ್ಲಿಸಿಲ್ಲ. ಬಜೆಟ್ ನ ನ್ಯೂನ್ಯತೆಗಳನ್ನು ಹೇಳಿಕೊಳ್ಳುವ ಅವಕಾಶ ವಿರೋಧ ಪಕ್ಷಕ್ಕಿತ್ತು. ಆದರೆ, ಬಜೆಟ್ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಸಭಾ ತ್ಯಾಗ ಮಾಡಿ ಪ್ರತಿಭಟನೆ ಮಾಡಿದ್ದು ದುರದೃಷ್ಟಕರ ಸಂಗತಿ ಎಂದರು.
ಈ ಹಿಂದಿನ ಬಜೆಟ್ ಗಳಲ್ಲಿ ಬಜೆಟ್ ಮಂಡನೆಯ ನಂತರವೇ ಟೀಕೆ, ಟಿಪ್ಪಣಿ ಮಾಡಲಾಗುತ್ತಿತ್ತು. ಆದರೆ, ಈ ಬಜೆಟ್ ನಲ್ಲಿ ವಿಚಿತ್ರವಾದ ಘಟನೆ ನಡೆದಿದೆ. ಬಜೆಟ್ ಕಾಪಿಯನ್ನೂ ನೋಡದೇ ರೈತ ವಿರೋಧಿ ಬಜೆಟ್, ಅಲ್ಪಸಂಖ್ಯಾತರ ಓಲೈಕೆಯ ಬಜೆಟ್ ಎಂದು ಆರೋಪಿಸುವುದು ಸರಿಯಲ್ಲ. ಒಂದು ವೇಳೆ ಅವರು ಆರೋಪಿಸಿದಂತೆ ಇದು ಓಲೈಕೆಯ ಬಜೆಟ್ ಆಗಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ವಿವಿಧ ದೇಶದಲ್ಲಿ ಮುಸ್ಲಿಮರು ಹಿಂದೂ ದೇವಾಲಯ ಕಟ್ಟಿದರೆ ಅದನ್ನು ಉದ್ಘಾಟಿಸುವ ಕೇಂದ್ರ ನಾಯಕರು, ನಮ್ಮ ದೇಶದ ಮುಸ್ಲಿಮರನ್ನು ಕಂಡರೆ ಉರಿದು ಬೀಳುತ್ತಾರೆ. ದೇವಸ್ಥಾನ ಕಟ್ಟುವುದರಿಂದ ದೇಶ ಉದ್ಧಾರ ಆಗುತ್ತೆ ಅನ್ನೋದಾದ್ರೆ, ಬಸವಣ್ಣನವರ ಕಾಯಕ ವಚನ ಏನಾಯ್ತು. ಇಡೀ ಜಗತ್ತು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ. ನಾವು ಮಾತ್ರ ಸರಿಯಾದ ಮಾರ್ಗದಲ್ಲಿ ಇದ್ದೇವೆ ಅಂದ್ರೆ ಅದಕ್ಕೆ ಕೇವಲ ಮೋದಿ ಕಾರಣವಲ್ಲ. ಈ ಹಿಂದೆ ಆಳಿ ಹೋದ ಅನೇಕ ಪ್ರಧಾನಿಗಳ ಕೊಡುಗೆಯೂ ಅಪಾರವಿದೆ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ. ಅದರ ಬಗ್ಗೆ ಸ್ಪಷ್ಟೀಕರಣ ಕೇಳುವ ಅಧಿಕಾರವಿಪಕ್ಷಗಳಿಗಿತ್ತು. ಆದರೆ, ವಿಷಯ ತಿಳಿಕೊಳ್ಳದೆ ಪ್ಲೇಕಾರ್ಡ್ಗಳನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದರು. ನಬಾರ್ಡ್ ನಿಂದ ಹಣ ಪಡೆದು ಕಿಸಾನ್ ಸಮ್ಮಾನ್ ಯೋಜನೆಗೆ ಹಾಕಲಾಗಿದೆ. ದೇಶ ಮತ್ತು ರಾಜ್ಯದಲ್ಲಿ ತೀವ್ರ ಬರಗಾಲವಿದೆ. ರಾಷ್ಟ್ರೀಯ ರಸ್ತೆಗಳ, ವಿಮಾನ ನಿಲ್ದಾಣಗಳ ಬಗ್ಗೆ ಮಾತನಾಡುವ ನಾಯಕರು ನದಿ ಜೋಡಣೆ ವಿಚಾರ ಚಕಾರ ಎತ್ತುತ್ತಿಲ್ಲ. ಕೇವಲ ಭಾವನಾತ್ಮಕ ವಿಷಯಗಳನ್ನು ಕೇರಳಿಸುವುದರಿಂದ ದೇಶದ ಅಭಿವೃದ್ಧಿ ಆಗುವುದಿಲ್ಲ ಎಂದು ಟೀಕಿಸಿದರು.