*ಡಾ.ಅಂಬೇಡ್ಕರ್, ಬಸವೇಶ್ವರರ ವೇಷಭೂಷಣ ಧರಿಸಿ ಮಿಂಚಿದ ಚಿಣ್ಣರು*
ಹುಬ್ಬಳ್ಳಿ :ಜಿಲ್ಲೆಯಲ್ಲಿ ಜನೇವರಿ 26 ರಿಂದ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯು ಕುಂದಗೋಳ ತಾಲೂಕಿನ ಗುಡಗೇರಿ, ಗೌಡಗೇರಿ, ಕಳಸ, ಪಶುಪತಿಹಾಳ ಗ್ರಾಮಕ್ಕೆ ಆಗಮಿಸಿದಾಗ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವಣ್ಣನವರ ವೇಷಭೂಷಣ ಧರಿಸಿದ ಚಿಣ್ಣರು ಸಂವಿಧಾನ ಜಾಗೃತಿ ಜಾಥಾವನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ವೇಷಭೂಷಣವನ್ನು ಹಲವು ಮಕ್ಕಳು ಧರಿಸಿದ್ದು ವಿಶೇಷವಾಗಿತ್ತು. ಒಬ್ಬರಿಗಿಂತ ಒಬ್ಬರು ಮುದ್ದಾಗಿ ಕಾಣಿಸುತ್ತಿದ್ದರು. ಅಲ್ಲದೇ ಬಸವೇಶ್ವರರ ವೇಷಭೂಷಣವನ್ನು ಧರಿಸಿದ ಮಕ್ಕಳು ನೋಡುಗರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು. ರಾಷ್ಟçಪಿತ ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರು, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಛತ್ರಪತಿ ಶಿವಾಜಿ ಮಹಾರಾಜರು ಸೇರಿದಂತೆ ವಿವಿಧ ಮಹಾನ ನಾಯಕರ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.
ಮಹಿಳೆಯರ ಡೊಳ್ಳು ಕುಣಿತ, ಮುತ್ತೈದೆಯರ ಕುಂಭಮೇಳ, ಸೇವಾದಳ, ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಅದ್ಧೂರಿಯಾಗಿ ಮೆರವಣಿಗೆ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿತು. ನಮ್ಮ ಸಂವಿಧಾನ ನಮ್ಮ ಹೆಮ್ಮೆ, ನಮ್ಮ ಸಂವಿಧಾನ ನಮ್ಮ ಶಕ್ತಿ, ನಮ್ಮ ಸಂವಿಧಾನ ನಮ್ಮ ಅಭಿವೃದ್ಧಿ, ನಮ್ಮ ಸಂವಿಧಾನ ನಮ್ಮ ಪ್ರತಿಷ್ಠೆ, ಅಂಬೇಡ್ಕರ್, ಬಸವಣ್ಣನವರು, ಕಿತ್ತೂರು ರಾಣಿ ಚೆನ್ನಮ್ಮ ಕುರಿತಾದ ಜಯಘೋಷಗಳನ್ನು ಸಾರ್ವಜನಿಕರು ಕೂಗಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿಗಳು ನೃತ್ಯ, ಹಾಡುಗಳನ್ನು ಹಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯರಾದ ಮೀನಾಕ್ಷಿ ಗುದಗಿಯವರ ಅವರು ಸಂವಿಧಾನ ಪತ್ರಿಜ್ಞಾ ವಿಧಿಯನ್ನು ಬೋಧಿಸಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿಯರಾದ ಭಾರತಿ ಮೆಣಸಿನಕಾಯಿ, ಗುಡಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದ್ರಾಕ್ಷಾಯಣಿ ಶಿರೂರ್, ಉಪಾಧ್ಯಕ್ಷರಾದ ನಿರ್ಮಲಾ ಬೂದಿಹಾಳ, ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬಿ.ಎನ್.ರಾಘವೇಂದ್ರ, ಪಶುಪತಿಹಾಳ ಗ್ರಾಮ ಪಂಚಾಯತ ಅಧ್ಯಕ್ಷರಾದ ಶೀಲಾ ಕಾಳಿ, ಉಪಾಧ್ಯಕ್ಷರಾದ ಸುನಂದಾ ಮಾನೇದ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುರೇಶ್, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮುಖಂಡರು, ಶಿಶು ಅಭಿವೃದ್ದಿ ಅಧಿಕಾರಿಗಳು, ಹಾಗೂ ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಗುಡಗೇರಿ, ಗೌಡಗೇರಿ, ಕಳಸ, ಪಶಪತಿಹಾಳ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.