ಧಾರವಾಡ: ‘ಮುಖ್ಯಮಂತ್ರಿ ಹುದ್ದೆ ಆಕಾಂಕ್ಷೆ ಹೊಂದಿರುವ ಅರವಿಂದ ಬೆಲ್ಲದ ಅವರು ಏಳು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ. ಕೇಂದ್ರ ಸರ್ಕಾರ ನೀಡಿದ ಅನುದಾನದಲ್ಲಿ ಅರೆಬರೆ ರಸ್ತೆ ಕಾಮಗಾರಿ ನಡೆಸಿದ್ದೆ ಅವರ ಸಾಧನೆಯಾಗಿದೆ’ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಆರೋಪಿಸಿದರು.
‘ದೆಹಲಿಗೆ ಹೋದ ಬೆಲ್ಲದ ಅವರು ಸಾಮಾಜಿಕ ಜಾಲತಾಣದಲ್ಲಿ ತಾವು ಸಂಬಂಧಿಕರ ಭೇಟಿಗೆ ಹೋಗಿದ್ದು, ಯಾವುದೇ ರಾಜಕೀಯ ನಾಯಕರ ಭೇಟಿಗೆ ಅಲ್ಲ ಎಂದಿದ್ದಾರೆ. ಹಾಗಾದರೆ, ಬೆಲ್ಲದ ಅವರ ಸಂಬಂಧಿಕರು ಬಿಜೆಪಿ ಮುಖಂಡರಾದ ಅರುಣಸಿಂಗ್ ಹಾಗೂ ಬಿ.ಎಲ್.ಸಂತೋಷ ಅವರ ಮನೆಯಲ್ಲಿದ್ದಾರೆಯೇ’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಅರವಿಂದ ಬೆಲ್ಲದ ತಮ್ಮ ಕ್ಷೇತ್ರದ ಜನರಿಗೆ, ಸಮಾಜಕ್ಕೆ ಹಾಗೂ ಅವರ ಪಕ್ಷದ ಕಾರ್ಯಕರ್ತರಿಗೆ ಯಾವ ಕೆಲಸ ಮಾಡಿಕೊಟ್ಟಿದ್ದಾರೆ ಎಂಬುದನ್ನು ಬಹಿರಂಗವಾಗಿ ಹೇಳಲಿ. ಕೋವಿಡ್ ಸಮಯದಲ್ಲಿ ಇನ್ಫೊಸಿಸ್ ಪ್ರತಿಷ್ಠಾನ ನೀಡಿದ ಕಿಟ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಿಎಸ್‌ಆರ್ ಅನುದಾನದಲ್ಲಿ ಕೊಡಿಸಿದ ಆಹಾರ ಮತ್ತು ಆಮ್ಲಜನಕ ಕಿಟ್‌ಗಳನ್ನು ವಿತರಿಸಿದ್ದಾರೆಯಷ್ಟೇ. ಪಕ್ಷ ಕಟ್ಟದೆ, ಕ್ಷೇತ್ರದ ಜನರಿಗೆ ದುಡಿಯದ ಬೆಲ್ಲದ ಈಗ ಮುಖ್ಯಮಂತ್ರಿ ಆಗಲು ಹೊರಟಿರುವುದು ಹಾಸ್ಯಾಸ್ಪದ’ ಎಂದರು.
‘ಬೆಲ್ಲದ ಅವರ ಕ್ಷೇತ್ರದಲ್ಲೇ ಕೋವಿಡ್ ಲಸಿಕೆ ಸರಿಯಾಗಿ ದೊರೆಯುತ್ತಿಲ್ಲ. ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರ ಕಾರ್ಯವೈಖರ ಪರಿಶೀಲಿಸಿಲ್ಲ. ತಮ್ಮ ಮನೆಯ ಎದುರಿನ ಟೆಂಡರ್ ಶ್ಯೂರ್ ರಸ್ತೆ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ತಮ್ಮ ಕ್ಷೇತ್ರದ ಅಭಿವೃದ್ಧಿಯೇ ಗೊತ್ತಿಲ್ಲದ ಶಾಸಕನನ್ನು ಮುಖ್ಯಮಂತ್ರಿ ಮಾಡಿದರೆ ಕ್ಷೇತ್ರದ ಗತಿ ಏನು?’ ಎಂದು ಟೀಕಿಸಿದರು.
‘ಜಿಲ್ಲೆಯಲ್ಲಿ ಹಿರಿಯರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಜಗದೀಶ ಶೆಟ್ಟರ್ ಇದ್ದಾರೆ. ಅವರನ್ನು ಮೀರಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ ಬೆಲ್ಲದ ಅವರು ಕಣ್ಣಿಟ್ಟಿದ್ದಾರೆ. ಅವರೊಬ್ಬ ವ್ಯಾಪಾರಿ ರಾಜಕಾರಣಿಯಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಅವರು ಅರ್ಹರಲ್ಲ’ ಎಂದು ಹುಣಸಿಮರದ ಹೇಳಿದರು.
Check Also
ಮಳೆ ಹಾನಿ ಪರಿಹಾರ ನೀಡಲು ಸರ್ಕಾರ ಸದಾ ಸಿದ್ದ ಏನ್ ಹೆಚ್ ಕೋನರಡ್ಡಿ
Spread the love ಹುಬ್ಬಳ್ಳಿ; ವಾಯುಭಾರ ಕುಸಿತದಿಂದ ಸುರಿದ ಭಾರಿ ಮಳೆಗೆ ರೈತರು ಬೆಳೆದ ಬೆಳೆ, ರಸ್ತೆ ಹಾಗೂ ಸೇತುವೆಗಳು …