ಹುಬ್ಬಳ್ಳಿ: ನಗರದ ಕಾರವಾರ ರಸ್ತೆ ಎಂಟಿಎಸ್ ಕಾಲೋನಿಯಲ್ಲಿ ಪಾಳುಬಿದ್ದ ಜಾಗದಲ್ಲಿ ಅರೆಬೆಂದ ಸ್ಥಿತಿಯಲ್ಲಿ ದೊರೆತಿದ್ದ ಯುವಕನ ಕೊಲೆಗೆ ಅನೈತಿಕ ಸಂಬಂಧವೇ ಕಾರಣವೆಂದು ತಿಳಿದುಬಂದಿದೆ.
ಹಳೇಹುಬ್ಬಳ್ಳಿ ಹೆಗ್ಗೇರಿ ಮಾರುತಿನಗರದ ವಿಜಯ ಸುರೇಶ ಬಸವಾ (24) ಎಂಬಾತನ ಶವ ಪತ್ತೆಯಾಗಿತ್ತು. ಆತನ ಸಹೋದ್ಯೋಗಿ ಮಂಟೂರ ರಸ್ತೆ ಮಿಲ್ಲತ್ ನಗರದ ಸೈಯದ್ ಅಜರ್ ಎಂಬಾತನೇ ಕೊಲೆ ಮಾಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಜಯ್ ಮತ್ತು ಸೈಯದ್ ಇಬ್ಬರೂ ಸ್ನೇಹಿತರಾಗಿದ್ದು, ಒಂದೇ ಕಂಪನಿಯಲ್ಲಿ ಉದ್ಯೋಗಿ ಯಾಗಿದ್ದರು. ಆದರೆ ವಿಜಯ ಆತನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದರಿಂದ ಕುಪಿತನಾಗಿದ್ದ ಸೈಯದ್ ಹೇಗಾದರೂ ಮಾಡಿ ಆತನನ್ನು ಮುಗಿಸಬೇಕೆಂದು ಯೋಚಿಸಿದ್ದ ಎನ್ನಲಾಗಿದೆ.
ಅದರಂತೆ ಮಂಗಳವಾರ ರಾತ್ರಿ ಇಬ್ಬರು ಸೇರಿ ಕಾರವಾರ ರಸ್ತೆಯ ಎಂಟಿಎಸ್ ಕಾಲೋನಿಯ ಪಾಳುಬಿದ್ದ ಜಾಗದಲ್ಲಿ ಮದ್ಯ ಸೇವಿಸಿದ್ದಾರೆ. ಮದ್ಯದ ನಶೆಯಲ್ಲಿದ್ದ ವಿಜಯನ ಮೇಲೆ ಸೈಯದ್ ಕಲ್ಲು ಎತ್ತಿ ಹಾಕಿ, ಪೆಟ್ರೋಲ್ ಸುರಿದು ಸುಟ್ಟು ಹಾಕಿ, ಸಾಕ್ಷಾಧಾರ ನಾಶ ಪಡಿಸಲು ವಿಜಯನ ಮೊಬೈಲ್ ತೆಗೆದುಕೊಂಡು ಹೋಗಿದ್ದ.
ಈ ಕುರಿತು ಹಳೇಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕೊಲೆಯಾದ ಸ್ಥಳದಲ್ಲಿ ದೊರೆತ ಕುರುಹು ಮತ್ತು ತಂತ್ರಜ್ಞಾನ ಬಳಸಿ ಹಂತಕನನ್ನು ಕೃತ್ಯ ನಡೆದ 24 ಗಂಟೆ ಒಳಗಾಗಿ ಬಂಧಿಸಿದ್ದು ಸಾರ್ವಜನಿಕ ವಲಯದಲ್ಲಿ ಶ್ಲಾಘನೀಯವಾಗಿದೆ. ಈ ಕುರಿತು ಹುಬ್ಬಳ್ಳಿ ಧಾರವಾಡ ಪೊಲೀಸ್
ಕಮೀಷನರ್ ರೇಣುಕಾ ಸುಕುಮಾರ ಸಹ ಮಾಹಿತಿ ನೀಡಿದರು.
