ಹುಬ್ಬಳ್ಳಿ: ಅತ್ಯುತ್ತಮ ಶಸ್ತ್ರ ಚಿಕಿತ್ಸಾ ವಿಡಿಯೋಗಾಗಿ ನಗರದ ಎಂ.ಎಂ. ಜೋಶಿ ನೇತ್ರವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಶ್ರೀನಿವಾಸ ಜೋಶಿ ಅವರಿಗೆ ಸತತ 7ನೇ ಬಾರಿ ರೆಟ್-ಬಕ್ಲರ್ ಪ್ರಶಸ್ತಿ ಲಭಿಸಿದೆ.
ಅಮೆರಿಕದ ಸಿಯಾಟಲ್ ನಗರದಲ್ಲಿ ಆ. 1ರಂದು ಆಯೋಜಿಸಿದ್ದ ಎಎಸ್ಆರ್ಎಸ್ನ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೆಟಿನಾ ಶಸ್ತ್ರಚಿಕಿತ್ಸಕರನ್ನು ಒಳಗೊಂಡಿರುವ ಅಮೆರಿಕನ್ ಸೊಸೈಟಿ ಆಫ್ ರೆಟಿನಲ್ ಸ್ಪೆಷಲಿಸ್ಟ್ (ಎಎಸ್ಆರ್ಎಸ್) ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ಸಂಸ್ಥೆ. ಎಎಸ್ಆರ್ಎಸ್ ಸಮ್ಮೇಳನವು ಸಂಕೀರ್ಣವಾದ ವಿಟ್ರಿಯೋ ರೆಟಿನಲ್ ಶಸ್ತ್ರಚಿಕಿತ್ಸೆಗಳಲ್ಲಿ ಆದ ಇತ್ತೀಚಿನ ಪ್ರಗತಿಗಳ ಕುರಿತ ಪ್ರದರ್ಶನಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಷಯದಲ್ಲಿ ಪರಿಣತರಾದ ಡಾ. ಶ್ರೀನಿವಾಸ ಜೋಶಿ ಅವರಿಗೆ ಮತ್ತೊಮ್ಮೆ ರೆಟ್-ಬಕ್ಲರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಡಾ. ಜೋಶಿ ಅವರು, ಸತತ ಏಳನೇ ಬಾರಿ ನನಗೆ ಈ ಪ್ರಶಸ್ತಿ ಒಲಿದಿರುವುದಕ್ಕೆ ಸಂತಸವಾಗಿದೆ. ಸಹ ಲೇಖಕ ಡಾ. ಗಿರಿರಾಜ್ ವಿಭೂತೆ, ಮಾರ್ಗದರ್ಶಕ ಡಾ.ಎ.ಎಸ್. ಗುರುಪ್ರಸಾದ್ (2016ರಲ್ಲಿ ರೆಟ್-ಬಕ್ಲರ್ ಪ್ರಶಸ್ತಿ ಪುರಸ್ಕೃತರು) ಅವರಿಗೂ ಧನ್ಯವಾದ ಸಲ್ಲಿಸಿದ್ದಾರೆ.
