ಹುಬ್ಬಳ್ಳಿ: ಉತ್ತರ ಕರ್ನಾಟಕ ಶಾಮಿಯಾನ ಸಪ್ಲೈಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆ. 5, 6 ಮತ್ತು 7 ರಂದು ನಗರದ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್ನಲ್ಲಿ ಶಾಮಿಯಾನ ವೃತ್ತಿ ನಿರತರ ಮಹಾ ಅಧಿವೇಶನ ಹಾಗೂ ಶಾಮಿಯಾನ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ. ನರಸಿಂಹಮೂರ್ತಿ ಅಪ್ಪಣ್ಣ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವಿಜಯಪುರ, ಧಾರವಾಡ, ಬೆಳಗಾವಿ, ರಾಯಚೂರು, ಬಾಗಲಕೋಟ, ಗದಗ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ, ವಿಜಯನಗರ, ಕಲಬುರ್ಗಿ, ಹಾವೇರಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ವೃತ್ತಿ ಬಾಂಧವರು ಪಾಲ್ಗೊಳ್ಳುವರು. ದೇಶದ ವಿವಿಧೆಡೆಯಿಂದ ಶಾಮಿಯಾನ ವೃತ್ತಿಯಲ್ಲಿ ಬಳಕೆಯಾಗುವ ಪರಿಕರಗಳ ಮಾರಾಟಗಾರರು ಪಾಲ್ಗೊಳ್ಳುವರು. ಕೃತಕ ಹೂವುಗಳು, ಕಾರಂಜಿ, ಫೈಬರ್ ವಸ್ತುಗಳು, ಇತ್ಯಾದಿಗಳ 110ರಿಂದ 120 ಮಳಿಗೆಗಳನ್ನು ತೆರೆಯಲಾಗುತ್ತಿದೆ ಎಂದು ಹೇಳಿದರು.
ಆ. 5ರಂದು ಬೆಳಗ್ಗೆ 10 ಗಂಟೆಗೆ 14 ಜಿಲ್ಲೆಗಳ ಧ್ವಜಾರೋಹಣ ನೆರವೇರಿ ಸಲಾಗುವುದು. ಆಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲಫೇರ್ ಆರ್ಗನೈಜೇಶನ್ (ಎಐಟಿಡಿಡಬ್ಲ್ಯುಒ) ಜಿ. ಪೂರ್ಣ ಚಂದ್ರರಾವ್ ಪೂಜಾ ಸಮಾರಂಭ ಉದ್ಘಾಟಿಸುವರು. 11 ಗಂಟೆಗೆ ಎಐಟಿಡಿಡಬ್ಲ್ಯುಒ ಪ್ರಧಾನ ಕಾರ್ಯದರ್ಶಿ ಕರ್ತಾರ್ಸಿಂಗ್ ಕೋಚಾರ್ ವಸ್ತು ಪ್ರದರ್ಶನ ಉದ್ಘಾಟಿಸುವರು. ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಜೆ 4 ಗಂಟೆಗೆ ಮಹಾ ಅಧಿವೇಶನ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸುವರು.
6ರಂದು ಬೆಳಗ್ಗೆ 10 ಗಂಟೆಯಿಂದ ಸಂಘದ ಕಾರ್ಯಚಟುವಟಿಕೆ, ಸಂಘಟನೆಯ ಬಗ್ಗೆ ಚರ್ಚೆ, ಜಿಎಸ್ಟಿ, ವಿಮೆ ಕುರಿತು ಉಪನ್ಯಾಸ, ಸಂಜೆ 6 ಗಂಟೆಗೆ ಮುಂಬೈ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ, 7ರಂದು ಸಂಜೆ 5 ಗಂಟೆಗೆ ಸಮಾರೋಪ, ಅಧಿಕಾರ ಹಸ್ತಾಂತರ, ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
