ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಭಾವಿ ಮುಖಂಡ ತವನಪ್ಪ ಅಷ್ಟಗಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತವನಪ್ಪ ಅಷ್ಟಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಪ್ರಭಾವಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ನಿನ್ನೆ ಬಿಜೆಪಿ ಅಮೃತ ದೇಸಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಮುನಿಸಿಕೊಂಡ ತವನಪ್ಪ ಅಷ್ಟಗಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೆರಡು ದಿನದಲ್ಲಿ ನನ್ನ ಬೆಂಬಲಿಗರ ಸಭೆ ಕರೆದು ಮುಂದಿನ ನಡೆ ಬಗ್ಗೆ ಪ್ರಕಟ ಮಾಡುತ್ತೇನೆ. ನನಗೆ ಸಿಎಂ ಸ್ಥಾನ ಕೊಡುತ್ತೇನೆ ಎಂದರೂ ನಾನು ಬಿಜೆಪಿಗೆ ಮರಳಿ ಹೋಗುವುದಿಲ್ಲ. ಪ್ರಧಾನಿಗಳೇ ಮನವೊಲಿಸಿದರೂ ಸೊಪ್ಪು ಹಾಕುವುದಿಲ್ಲ ಎಂದರು.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಇನ್ನಿಬ್ಬರು ಟಿಕೆಟ್ ಆಕಾಂಕ್ಷಿಗಳಿದ್ದರು. ಅವರು ಕೂಡ ಬೇಜಾರಾಗಿದ್ದಾರೆ. ಅವರೂ ನನ್ನೊಟ್ಟಿಗಿದ್ದಾರೆ. ಇಂದು ಬಿಜೆಪಿ ನನಗೂ ಹಾಗೂ ಜೈನ ಸಮಾಜಕ್ಕೂ ಮೋಸ ಮಾಡಿದೆ ಎಂದರು.
ಜಗದೀಶ ಶೆಟ್ಟರ್ ಅವರಿಗೂ ಟಿಕೆಟ್ ಕೈತಪ್ಪಿಸುವ ಹುನ್ನಾರ ನಡೆದಿದ್ದು, ಅದು ಕೂಡ ನನ್ನ ಮನಸ್ಸಿಗೆ ಬಹಳ ಬೇಸರ ತರಿಸಿದೆ. ರಾಜಕೀಯವಾಗಿ ಶೆಟ್ಟರ್ ಅವರನ್ನು ಅತಂತ್ರಗೊಳಿಸಲು ಹೊರಟಿರುವುದು ಸರಿಯಲ್ಲ. ಇದು ಬಿಜೆಪಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ನಾನು ಕೂಡ 10 ವರ್ಷ ನಾನೂ ಕೂಡ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಆದರೆ, ನಿನ್ನೆ ಏಕಪಕ್ಷೀಯವಾಗಿ ಟಿಕೆಟ್ ಘೋಷಣೆ ಮಾಡಲಾಗಿದೆ. ಜನರ ಮನಸ್ಸಿಗೆ ವಿರುದ್ಧವಾಗಿ ಅಮೃತ ದೇಸಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದು ಕ್ಷೇತ್ರದ ಜನರಿಗೆ ತೀವ್ರ ನೋವುಂಟು ಮಾಡಿದೆ ಎಂದರು.
2018ರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಬೊಮ್ಮಾಯಿ ಅವರು ಈಡೇರಿಸಿಲ್ಲ. ಬೊಮ್ಮಾಯಿ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದಾರೆ. ಎಂಎಲ್‌ಸಿ ಮಾಡುತ್ತೇವೆ ಎಂದಿದ್ದರು ಅದನ್ನೂ ಮಾಡಲಿಲ್ಲ. ನಿಗಮ ಮಂಡಳಿ ನೀಡುವಾಗಲೂ ವಿಳಂಬ ಮಾಡಿದರು. ನಮ್ಮ ಸಮಾಜ ಬೆಳೆಯಬಾರದು ಎಂದು ಬೊಮ್ಮಾಯಿ ಅವರು ಈ ರೀತಿಯ ಹತ್ತಿಕ್ಕುವ ಕೆಲಸ ಮಾಡಿದರು ಎಂದರು.
ಜಾತ್ಯಾತೀತವಾಗಿ ನಾನು ಬೆಳೆದಿದ್ದೇನೆ. ಆದರೆ, ಬಿಜೆಪಿಯವರು ಜಾತಿ ಮತ್ತು ಹಣದ ಆಧಾರದ ಮೇಲೆ ಟಿಕೆಟ್ ನೀಡಿದ್ದಾರೆ. ಈ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. 189 ಕ್ಷೇತ್ರಗಳ ಪೈಕಿ ಕೇವಲ ಒಬ್ಬರಿಗೆ ಮಾತ್ರ ನಮ್ಮ ಸಮಾಜದ ನಾಯಕರಿಗೆ ಟಿಕೆಟ್ ನೀಡಲಾಗಿದೆ. ನಮ್ಮ ಸಮಾಜಕ್ಕೆ ಬಿಜೆಪಿ ದೊಡ್ಡ ಅನ್ಯಾಯ ಮಾಡಿದೆ ಹೀಗಾಗಿ ನಾನು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂದರು.