ಹುಬ್ಬಳ್ಳಿ : ಮನೆ ಇಲ್ಲದ ಬಡವರಿಗೆ ಸೂರು ಕಲ್ಪಿಸಲು ಉಚಿತವಾಗಿ ನಿವೇಶನ ನೀಡಲು ಫಲಾನುಭವಿಗಳನ್ನು ನನ್ನ ಅಧಿಕಾರ ಅವಧಿಯಲ್ಲಿ ಆಯ್ಕೆ ಮಾಡಿ 6 ವರ್ಷ ಕಳೆದರೂ ನವಲಗುಂದ ಹಾಗೂ ಅಣ್ಣಿಗೇರಿ ನಗರದ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡದೇ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಅನ್ಯಾಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಆಕ್ರೋಶ ವ್ಯಕ್ತಪಡೆಸಿದರು
ಈ ಕುರಿತು ಮಾತನಾಡಿದ ಅವರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಶಾಸಕನಿದ್ದ ಅವಧಿಯಲ್ಲಿ ನವಲಗುಂದ ನಗರದ ಮನೆ ಇಲ್ಲದ ಬಡವರಿಗೆ ಉಚಿತವಾಗಿ ನಿವೇಶನ ನೀಡಲು 41 ಎಕರೆ ಜಮೀನು ಖರೀದಿಸಿ 850 ಫಲಾನುಭವಿಗಳನ್ನು 2017 ರಲ್ಲಿ ಆಯ್ಕೆ ಮಾಡಿ ಹೆಚ್ಚುವರಿ ಉಳಿದ ಜಮೀನಿನಲ್ಲಿ 400 ಕ್ಕೂ ಹೆಚ್ಚು ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿತ್ತು ಮತ್ತು ಅಣ್ಣಿಗೇರಿ ನಗರದಲ್ಲಿ 18 ಎಕರೆ ಜಮೀನು ಖರೀದಿಸಿ 650 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕು ಪತ್ರ ವಿತರಣೆ ಮಾಡುವ ಸಂದರ್ಭದಲ್ಲಿಯೇ 2018 ರ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ನನಗೆ ಹಕ್ಕು ಪತ್ರ ವಿತರಣೆ ಮಾಡಲು ಸಾಧ್ಯವಾಗಲಿಲ್ಲ.
ನವಲಗುಂದ ಅಣ್ಣಿಗೇರಿಯಲ್ಲಿ ಆಶ್ರಯ ನಿವೇಶನ ನೀಡಲು ಜಮೀನು ಖರೀದಿಸಿ ಕೆಜೆಪಿ ಮಾಡಿ ಪ್ಲಾಟ್ ನಂಬರ ನಮೂದಿಸಿ ಹಕ್ಕುಪತ್ರ ವಿತರಣೆಯಾದ ನಂತರ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಣಿ ಮಾಡಿ ಉತಾರದಲ್ಲಿ ಫಲಾನುಭವಿಗಳ ಹೆಸರು ಬರುವಂತೆ ಕ್ರಮ ತೆಗೆದುಕೊಂಡ ತೃಪ್ತಿ ನನಗಿದ್ದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.
೫ ವರ್ಷ ಹಕ್ಕು ಪತ್ರ ವಿತರಣೆ ಮಾಡದೇ ಕಾಲಹರಣ ಮಾಡಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ನವಲಗುಂದದಲ್ಲಿ 1250, ಅಣ್ಣಿಗೇರಿಯಲ್ಲಿ 650 ಬಡ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಬೇಕಿತ್ತು, ಬಡವರಿಗೆ ನಿವೇಶನ ಹಂಚಿಕೆ ಮಾಡದೇ ಮನೆ ಕಟ್ಟಲು ಯಾವುದೇ ಕ್ರಮ ಜರುಗಿಸದೇ ಅನ್ಯಾಯ ಮಾಡಿ ಇನ್ನೂ ಕೇವಲ ಒಂದು ವಾರದಲ್ಲಿ 2023ರ ವಿಧಾನಸಭೆ ಚುನಾವಣೆ ಘೋಷಣೆ ಆಗುವ ಸಂದರ್ಭ ಉಪಯೋಗಿಸಿಕೊಂಡು ತರಾತುರಿಯಲ್ಲಿ ಕೇವಲ 10 ಜನ ಫಲಾನುಭವಿಗಳಿಗೆ ಮಾತ್ರ ಹಕ್ಕುಪತ್ರ ವಿತರಣೆ ಮಾಡಲು ಮುಂದಾಗಿರುವದು ಸರಿಯಲ್ಲ. ಈಗಾಗಲೇ ಆಯ್ಕೆ ಮಾಡಿದ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಬೇಕೆಂದು ನವಲಗುಂದ ಪುರಸಭೆ ಹಾಗೂ ಅಣ್ಣಿಗೇರಿ ಪುರಸಭೆಯ ಅಧ್ಯಕ್ಷರು, ಸದಸ್ಯರುಗಳು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಎಲ್ಲರಿಗೂ ಹಕ್ಕು ಪತ್ರ ವಿತರಿಸಲು ಒತ್ತಾಯಿಸಿ ನನಗೂ ಕೂಡ ಮನವಿ ಮಾಡಿದ್ದಾರೆ. ಅಧಿಕಾರದಲ್ಲಿ ಇದ್ದವರು 5 ವರ್ಷ ಏನೂ ಮಾಡದೇ ಕೇವಲ ಕಾಟಾಚಾರಕ್ಕೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಆಯೋಜಿಸಿದ್ದಾರೆ. ಪುರಸಭೆಯ ಸದಸ್ಯರ ಹಾಗೂ ಸಾರ್ವಜನಿಕರ ಮನವಿ ಮೆರೆಗೆ ಎಲ್ಲರಿಗೂ ಹಕ್ಕುಪತ್ರ ವಿತರಣೆ ಮಾಡಲು ಕೋನರಡ್ಡಿ ಒತ್ತಾಯಿಸಿದ್ದಾರೆ.
