ಶಾಸಕ‌ ಪ್ರಸಾದ ಅಬ್ಬಯ್ಯ ಸಾಧನೆಗಳ ಕಿರು ಪುಸ್ತಕ ಬಿಡುಗಡೆ

Spread the love

 

ಹುಬ್ಬಳ್ಳಿ: ‘ಶಾಸಕ ಪ್ರಸಾದ ಅಬ್ಬಯ್ಯ ಅವರು ಕಳೆದ ಹತ್ತು ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಪೂರ್ವ ವಿಧಾನಸಭಾ ಕ್ಷೇತ್ರದ ಚಹರೆ ಬದಲಿಸಿವೆ’ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ‌ ಹಳ್ಳೂರ ಹೇಳಿದರು.
ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಕ್ಕಾಗಿ ಕ್ಷೇತ್ರಕ್ಕೆ ಸುಮಾರು ₹1,300 ಕೋಟಿ ಅನುದಾನ ತಂದು ಕೆಲಸ ಮಾಡಿದ್ದಾರೆ’ ಎಂದು
‘ಸೆಂಟ್ರಲ್ ಮತ್ತು ಪಶ್ಚಿಮ ಕ್ಷೇತ್ರಗಳಿಗೆ ಹೋಲಿಸಿದರೆ, ಪೂರ್ವವು ಅಭಿವೃದ್ಧಿಯಲ್ಲಿ ಬಹಳ ಮುಂದಿದೆ. ಅಬ್ಬಯ್ಯ ಮಾಡಿರುವ ಅಭಿವೃದ್ಧಿ ಕುರಿತ ಈ ಕಿರುಹೊತ್ತಿಗೆಯನ್ನು ಮನೆಮನೆಗೆ ತಲುಪಿಸಿದರೆ ಸಾಕು. ಈ ಬಾರಿಯೂ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ’ ಎಂದರು.
‘ಪಕ್ಷ ಈಗಾಗಲೇ ನಾಲ್ಕು ಗ್ಯಾರಂಟಿ ಕಾರ್ಡ್‌ಗಳನ್ನು ಜನರಿಗೆ ಕೊಟ್ಟಿದೆ. ಜನರೂ ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಲು ಸಿದ್ಧರಾಗಿದ್ದಾರೆ. ಬಿಜೆಪಿಯ ಕೋಮು ರಾಜಕೀಯ ಇನ್ನು ಮುಂದೆ ನಡೆಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಬಿಜೆಪಿಗೆ ಜಾತಿ ಮತ್ತು ಧರ್ಮಾಧಾರಿತ ರಾಜಕಾರಣವೇ ಮುಖ್ಯ. ಚುನಾವಣೆಗಾಗಿ ಈದ್ಗಾ ಮೈದಾನ, ‌ದರ್ಗಾ ತೆರವು, ಹಲಾಲ್‌ ಮಾಂಸ ಸೇರಿದಂತೆ ಹಲವು ವಿಷಯಲ್ಲಿ ಜನರನ್ನು ಕೆರಳಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂದರು.
‘ಎಐಎಂಐಎಂ ಮತ್ತು ಎಸ್‌ಡಿಪಿಐ ಬಿಜೆಪಿಯ ‘ಬಿ’ ಟೀಂ ಎಂಬುದು ಸಾಬೀತಾಗಿದೆ. ಇವುಗಳೊಂದಿಗೆ ಕಾಂಗ್ರೆಸ್ ಮೈತ್ರಿ ಇಲ್ಲ. ನಮ್ಮ ಅಭ್ಯರ್ಥಿಗಳ ಗೆಲುವಿಗೆ ಈ ಪಕ್ಷಗಳಿಂದ ಯಾವುದೇ ತೊಂದರೆ ಇಲ್ಲ. ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುವ ಕುರಿತು, ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಇನ್ನು ಮೋಹನ ಲಿಂಬಿಕಾಯಿ ಅವರ ಕಾಂಗ್ರೆಸ್ ಸೇರ್ಪಡೆಗೂ ಮುಂಚೆ, ಪಕ್ಷದ ನಾಯಕರು ನಮ್ಮೊಂದಿಗೆ ಮಾತುಕತೆ ನಡೆಸಿರಲಿಲ್ಲ. ಯಾವುದೇ ಷರತ್ತು ಇಲ್ಲದೆ ಪಕ್ಷಕ್ಕೆ ಸೇರಿರುವುದಾಗಿ ಹೇಳಿರುವ ಅವರು, ಇದುವರೆಗೆ ಪಕ್ಷದ ಕಚೇರಿಗೂ ಬಂದಿಲ್ಲ. ನಮ್ಮನ್ನು ಭೇಟಿ ಮಾಡಿಲ್ಲ. ಪಶ್ಚಿಮ ಕ್ಷೇತ್ರದಲ್ಲಿ ಲಿಂಬಿಕಾಯಿ ಸ್ಪರ್ಧಿಸುತ್ತಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ. ಅಲ್ಲಿನ ಮತದಾರರ ಮನದಾಳ ನೋಡಿ ವರಿಷ್ಠರು ಟಿಕೆಟ್ ಘೋಷಿಸುತ್ತಾರೆ. ಈ ವಿಷಯದಲ್ಲಿ ನಮ್ಮ ಅಭಿಪ್ರಾಯ ಕೇಳಿದರೆ, ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ಕೊಡಿ ಎಂದು ಸಲಹೆ ನೀಡಲಾಗುವುದು’ ಎಂದು ಅಲ್ತಾಫ ಹಳ್ಳೂರ ಹೇಳಿದರು.
ಪಕ್ಷದ ಮುಖಂಡರಾದ ಸದಾನಂದ ಡಂಗನವರ, ವಸಂತ ಲದವಾ, ನವೀದ್ ಮುಲ್ಲಾ, ಡಿ.ಎಂ. ದೊಡ್ಡಮನಿ, ಬಸವರಾಜ ಬೆಣಕಲ್ಲ, ಡಾ. ಆನಂದಕುಮಾರ, ಮಹಮ್ಮದ್ ಕೂಳೂರು, ಪ್ರಸನ್ನ, ಹಿನಾಯತ್ ಖಾನ್ ಪಠಾಣ್, ಶಾರುಖ್ ಮುಲ್ಲಾ, ಸರೋಜಾ ಹೂಗಾರ, ವೀರಣ್ಣ, ಸುಧಾ ಮಣಿಕುಂಟ್ಲ, ಶ್ರೀನಿವಾಸ ಬೆಳದಡಿ ಇದ್ದರು.


Spread the love

About Karnataka Junction

    Check Also

    ನೇಹಾ ಕೊಲೆ‌ ಪ್ರಕಾರಣ: ಕೊಲೆ ಆರೋಪಿ ಫಯಾಜ್ ಕೊಲೆಯಾದ ಸ್ಥಳಕ್ಕೆ ಮಹಜರು

    Spread the loveಹುಬ್ಬಳ್ಳಿ: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ ವಿಚಾರವಾಗಿ ತನಿಖೆ ಚುರುಕು ಪಡೆದಿದ್ದು ನೇಹಾ ಕೊಲೆ ಆರೋಪಿ ಫಯಾಜ್ …

    Leave a Reply

    error: Content is protected !!