ಹುಬ್ಬಳ್ಳಿ: ಅಯ್ಯಪ್ಪ ಸ್ವಾಮಿಯ ಅದ್ಧೂರಿ ಶೋಭಾಯಾತ್ರೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಅದ್ಧೂರಿಯಾಗಿ ನಡೆಯಿತು. ಅಯ್ಯಪ್ಪ ಪೂಜೆಯ ವೇಳೆ ಕೊತ ಕೊತ ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಮಿರ್ಚಿ ತೆಗೆಯುವ ದೃಶ್ಯಗಳು ನೆರದಿದ್ದ ಭಕ್ತರನ್ನು ಮೈ ಜುಮ್ ಎನ್ನಿಸುವಂತೆ ಮಾಡಿತು. ಪ್ರಭು ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಇದೇ ಸಂದರ್ಭದಲ್ಲಿ ಕ್ಷೀರಾಭೀಷೆಕ ಹಾಗೂ ತುಲಾಭಾರ ಕಾರ್ಯಕ್ರಮ ಸಹ ನಡೆಯಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಕುದಿಯುವ ಎಣ್ಣೆಗೆ ಕೈ ಹಾಕಿ ಕಜ್ಜಾಯ ತೆಗೆದರು. ಕುದಿಯುವ ಎಣ್ಣೆ ಮತ್ತು ಮಿರ್ಚಿಗಳನ್ನು ಹೊಂದಿದ್ದ ಬಾಣಲೆಯ ಸುತ್ತಲೂ ಹೂವುಗಳನ್ನು ಎಸೆಯುತ್ತಾರೆ. ಬಹುನಿರೀಕ್ಷಿತ ಕಾರ್ಯಕ್ರಮವು ಅಲ್ಲಿಗೆ ಪ್ರಾರಂಭವಾಗುತ್ತದೆ. ಕುದಿಯುತ್ತಿರುವ ಎಣ್ಣೆಯಿರುವ ಒಲೆಯ ಮುಂದೆ ಅಯ್ಯಪ್ಪ ಮಾಲಾಧಾರಿಗಳು ಬರುತ್ತಾರೆ. ಬೆಟ್ಟದ ದೊರೆ ಅಯ್ಯಪ್ಪ ಸ್ವಾಮಿಗೆ ಸ್ಮರಿಸಿ ಮತ್ತು ನಮಸ್ಕರಿಸಿದ ನಂತರ, ಅವರು ತಮ್ಮ ಬೆರಳುಗಳನ್ನು ಬಿಸಿ ಎಣ್ಣೆಯಲ್ಲಿ ಮುಳುಗಿಸಿ, ಅದರಲ್ಲಿ ತೇಲುತ್ತಿರುವ ಮಿರ್ಚಿಗಳನ್ನು ಹೊರತೆಗೆದು ಅಯ್ಯಪ್ಪನ ಸನ್ನಿಧಿಗೆ ಸಮರ್ಪಣೆ ಮಾಡಿ ನಮಸ್ಕರಿಸಿದ್ದು ವಿಶೇಷವಾಗಿತ್ತು.
