ಹುಬ್ಬಳ್ಳಿ: ಅದು ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ವರವಾಗಬೇಕಿದ್ದ ಯೋಜನೆ. ಈ ಯೋಜನೆ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದೆ. ಈ ಯೋಜನೆಯಲ್ಲಿ ಆರೋಗ್ಯ ಸೇವೆ ಪಡೆಯಬೇಕಿದ್ದ ಜನರಿಗೆ ವಿಳಂಬದ ಬಿಸಿ ತಟ್ಟುತ್ತಿದೆ. ಅಷ್ಟಕ್ಕೂ ಏನಿದು ಯೋಜನೆ…? ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಮಹಾನಗರದ ಬಡವರಿಗೆ ಆರೋಗ್ಯ ಭಾಗ್ಯ ಕರುಣಿಸುತ್ತಿರುವ ಚಿಟಗುಪ್ಪಿ ಅಸ್ಪತ್ರೆಯನ್ನು ಸ್ಮಾರ್ಟ್‌ಸಿಟಿಯಡಿ ಎರಡು ವರ್ಷಗಳಿಂದ ನವೀಕರಿಸಲಾಗುತ್ತಿದೆ. ಸ್ಮಾರ್ಟ್‌ಸಿಟಿ ಕಂಪನಿ ಪ್ರಕಾರ ಕಳೆದ ಮೇ ತಿಂಗಳಲ್ಲೇ ಪೂರ್ಣಗೊಂಡು ರೋಗಿಗಳ ಸೇವೆ ಸನ್ನದ್ಧವಾಗಬೇಕಿತ್ತು. ಕೊರೊನಾ ಮತ್ತು ಇತರೆ ನೆಪಗಳ ಹಿನ್ನೆಲೆಯಲ್ಲಿ ಮತ್ತೆ ಆರು ತಿಂಗಳು ವಿಸ್ತರಿಸಲಾಗಿತ್ತು. ಅಂದರೆ, ಈ ಡಿಸೆಂಬರ್ ತಿಂಗಳಲ್ಲಿ ಬಿಲ್ಡಿಂಗ್ ಕಾಮಗಾರಿ ಮುಗಿಸಿ ಉದ್ಘಾಟನೆಯಾಗಬೇಕಿತ್ತು. ಸದ್ಯ ನಡೆಯುತ್ತಿರುವ ಕೆಲಸ ನೋಡಿದರೆ ಕನಿಷ್ಠ ಇನ್ನೂ 6 ತಿಂಗಳವಾದರೂ ಬೇಕೇ ಬೇಕು ಎನ್ನುತ್ತಾರೆ ಕಾರ್ಮಿಕರು ಮತ್ತು ಸಿಬ್ಬಂದಿ. ಮುಂದಿನ 100 ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ಅಷ್ಟರಲ್ಲೇ ಉದ್ಘಾಟಿಸಲೇ ಬೇಕು ಎಂದು ಮೇಲಿನವರು ಒತ್ತಡ ಹಾಕಿದರೆ ತರಾತುರಿಯಲ್ಲಿ ಕಾಮಗಾರಿಯ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿದು ಉದ್ಘಾಟನೆಯಾದರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಸಾರ್ವಜನಿಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ
2020 ಮೇ 28ರಂದು ಕಾಮಗಾರಿ ಆರಂಭಕ್ಕೆ ಕಾರ್ಯಾದೇಶ ನೀಡಲಾಗಿದೆ. ಅದೇ ವೇಳೆ 2021 ಮೇ 29ರಂದು ಕಾಮಗಾರಿ ಮುಗಿಸಬೇಕೆಂದೂ ಕಾಲಮಿತಿ ವಿಧಿಸಲಾಗಿದೆ. ಕೊರೋನಾ ಮತ್ತಿತರ ಕಾರಣಗಳಿಂದ ಒಂದಷ್ಟು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಇದಾದ ಬಳಿಕವೂ ಮತ್ತೆ ಕಾಲಮಿತಿಯನ್ನು ಡಿಸೆಂಬರ್ 2022ಕ್ಕೆ ವಿಸ್ತರಿಸಲಾಯಿತು. ಆದರೂ ಕೆಲಸ ಇನ್ನೂ ಪ್ರತಿಶತ 30ರಷ್ಟು ಬಾಕಿ ಇದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದನ್ನು ಗಮನಿಸಿದರೆ ಸ್ಮಾರ್ಟ್‌ಸಿಟಿ ಕಂಪನಿಯು ಟೆಂಡರ್ ನಲ್ಲಿ ನಮೂದಿಸಿದ ಕಾಲಮಿತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇದನ್ನು ಕೇಳಬೇಕಾದ ಸ್ಮಾರ್ಟ್‌ಸಿಟಿಯವರೂ ಸಹ ಜಾಣಮೌನ ವಹಿಸಿದ್ದಾರೇ ಎಂದು ಸ್ಥಳೀಯರಾದ
ಆಶೀಪ್ ಕಿಡಿಕಾರಿದರು
ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬದಿಂದ ಜನರಿಗೆ ಮೂಲಭೂತ ಸೌಕರ್ಯಗಳ ಸೇವೆ ದೊರೆಯುವುದು ದೂರದ ಮಾತಾಗಿದ್ದರೂ ಈಗ ಆರೋಗ್ಯ ಸೇವೆ ಕೂಡ ವಿಳಂಬವಾಗುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಇನ್ನಾದರೂ ಕಾಮಗಾರಿಗೆ ವೇಗ ಕಲ್ಪಿಸಿ ಆದಷ್ಟು ಬೇಗ ಸೇವೆಗೆ ಮುಕ್ತ ಮಾಡುವ ಕಾರ್ಯವನ್ನು ಮಾಡಬೇಕಿದೆ.
Check Also
ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ವಿರುದ್ದ FIR ದಾಖಲು
Spread the loveಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇಸ್ ನಂಬರ್ …