ಧಾರವಾಡ : ನಗರದಲ್ಲಿ ಕಬ್ಬು ಬೆಳೆಗಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಸೋಮವಾರದಿಂದಲೇ ಧರಣಿ ಆರಂಭಿಸಿರುವ ಕಬ್ಬು ಬೆಳೆಗಾರರು ಇಂದು ಜಿಲ್ಲಾಧಿಕಾರಿ ಕಚೇರಿಯ ಒಳಗೆ ನುಗ್ಗಲು ಯತ್ನಿಸಿದರು. ಎತ್ತುಗಳ ಜೊತೆ ಕಬ್ಬು ಹಿಡಿದು ಡೊಳ್ಳು ಬಾರಿಸುವ ಮೂಲಕ ಪ್ರತಿಭಟನೆ ಮಾಡಲಾಯಿತು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.
3 ನೆಯ ದಿನಕ್ಕೆ ಕಾಲಿಟ್ಟಿರುವ ಪ್ರತಿಭಟನೆ ಕಾವು ಪಡೆಯುತ್ತಿದೆ. ಜಿಲ್ಲಾಧಿಕಾರಿ ಒಳ ಪ್ರವೇಶಕ್ಕೆ ಅನುವು ಮಾಡುವಂತೆ ರೈತರು ಒತ್ತಾಯಿಸಿದರು. ಡಿಸಿ ಕಚೇರಿ ಎದುರು ಪ್ರತಿಭಟನೆ ಮುಂದುವರೆದಿದೆ.
ಇನ್ನೂ, ಸಕ್ಕರೆ ಸಹಕಾರ ಸಚಿವರ ತವರು ಜಿಲ್ಲೆಯಾಗಿರುವ ಧಾರವಾಡದಲ್ಲಿ ಎಲ್ಲ ಸಭೆ ಸಮಾರಂಭದಲ್ಲಿ ಭಾಗಿಯಾಗುವ ಸಚಿವರು ಪ್ರತಿಭಟನಾ ಸ್ಥಳಕ್ಕೆ ಮಾತ್ರ ಬಂದು ಪ್ರತಿಭಟನಾಕಾರರ ಮನವೊಲಿಸುವ ಕೆಲಸ ಮಾಡುತ್ತಿಲ್ಲ. ಇದರಿಂದ ರೊಚ್ಚಿಗೆದ್ದಿರುವ ರೈತರು ರೈತ ಮುಖಂಡ ಕುರಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ನಮ್ಮ ಬೇಡಿಕೆಗಳು ಈಡೇರಿಕೆ ಆಗೋವರೆಗೂ ನಮ್ಮ ಹೋರಾಟವನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಬರೋವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಅವರು ಕೂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಅದಕ್ಕೂ ಜಗ್ಗದ ಪ್ರತಿಭಟನಾ ನಿರತ ಕಬ್ಬು ಬೆಳೆಗಾರರು ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ.
ಇನ್ನೂ ಧಾರವಾಡ ಜಿಲ್ಲೆಯಲ್ಲಿ ಒಂದು ಸಕ್ಕರೆ ಕಾರ್ಖಾನೆ ಇಲ್ಲ. ಇಲ್ಲಿ ಪ್ರತಿಭಟನೆ ಮಾಡುವುದು ಎಷ್ಟು ಸರಿ. ರೈತರ ಹಾದಿಯನ್ನು ರೈತ ಮುಖಂಡ ಕುರಬೂರು ಶಾಂತಕುಮಾರ್ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಎಲೆಕ್ಷನ್ ಹೊಸ್ತಿಲಿನಲ್ಲಿ ಈ ರೀತಿ ಪ್ರತಿಭಟನೆ ನಡೆಸುವುದು ಸರಿನಾ. ಈಗಾಗಲೇ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಆರಂಭಿಸಿವೆ. ಕೇವಲ 22 ಕಾರ್ಖಾನೆಗಳು ಆರಂಭಿಸಬೇಕಿವೆ. ಇದರ ನಡುವೆ ಈ ಹೋರಾಟ ಎಷ್ಟರ ಮಟ್ಟಿಗೆ ಸರಿ ಎಂದು ಕೇಳಲಾಗುತ್ತಿದೆ.
ರೈತರ ಜೊತೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತುಕತೆ ಮಾಡಲು ಯತ್ನಿಸಿದರು. ನಾಳೆ ಸಂಜೆಯವರೆಗೂ ಹೋರಾಟ ಮಾಡೋದಾಗಿ ರೈತರು ಗಡುವು ನೀಡಿದ್ದಾರೆ.
24 ಗಂಟೆಗಳ ಗಡುವು ನೀಡಿರೋ ರೈತರು, ಸಚಿವ ಮುನೇನಕೊಪ್ಪ ಬರುವವರೆಗೂ ಪ್ರತಿಭಟನೆ ಹಿಂಪಡೆಯದಿರಲು ತೀರ್ಮಾನ ಮಾಡಿದ್ದಾರೆ.