ನೂತನ ಶಿಕ್ಷಣ ನೀತಿಯಿಂದ ಕ್ರಾಂತಿಕಾರಿ ಬದಲಾವಣೆ- ಸಚಿವ ಪ್ರಲ್ಹಾದ್ ಜೋಶಿ

Spread the love

ಧಾರವಾಡ : ನಗರದಲ್ಲಿ 60 ಎಕರೆ ಪರಿಸರಸ್ನೇಹಿ ವಾತಾವರಣದಲ್ಲಿ 114 ಕೋಟಿ ರೂಪಾಯಿ ವೆಚ್ಚದಲ್ಲಿ 41,800 ಚದರ ಮೀಟರ್ ವಿಸ್ತೀರ್ಣದಲ್ಲಿ ಐಐಟಿ ಸಂಸ್ಥೆ ನಿರ್ಮಾಣವಾಗಿದೆ.‌ ಐಐಟಿ ಸಂಸ್ಥೆಯನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಗಣಿ ಕಲ್ಲ ಹಾಗೂ ಸಂಸದೀಯ ವ್ಯವಹಾರಗಳ ಖಾತೆ
ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡ ಐಐಟಿ ಯಲ್ಲಿ ಇಂದು ನಡೆದ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಧಾರವಾಡ ಐಐಟಿ ಕ್ಯಾಂಪಸ್ ನಲ್ಲಿ ಸುಮಾರು 1.2 ಕೋಟಿ ಲೀಟರ್ ಮಳೆನೀರು ಕೊಯ್ಲು ಮಾಡುವ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿಯಲ್ಲಿ ಇದರ ಶಂಕುಸ್ಥಾಪನೆ ನೆರವೇರಿಸಿದ್ದರು. ಸಂಸ್ಥೆಯಲ್ಲಿ ಇನ್ಕ್ಯೂಬೇಶನ್ ಕೇಂದ್ರವನ್ನು ಪ್ರಾರಂಭಿಸುವಂತೆ ಸಲಹೆ ನೀಡಿದ್ದರು. ಅದಕ್ಕಾಗಿ‌ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಕೂಡ ಧಾರವಾಡ IITಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕುಡಿಯುವ ನೀರಿಗಾಗಿ 11.21 ಕೋಟಿ ರೂಪಾಯಿ ಅನುದಾನ ಒದಗಿಸಲು ಅನುಮೋದನೆ ನೀಡಿದೆ ಎಂದು ಇದೇ ವೇಳೆ ಜೋಶಿ ತಿಳಿಸಿದರು.
ಇಂದಿನ ಘಟಿಕೋತ್ಸವದಲ್ಲಿ 4 ಎಂಎಸ್, 1 ಪಿಎಚ್ ಡಿ ಹಾಗೂ 120 ಬಿ.ಟೆಕ್ ಸೇರಿದಂತೆ ಪದವಿ ಪ್ರಮಾಣಪತ್ರ ಸ್ವೀಕರಿಸಿದ ಒಟ್ಟು 125 ವಿದ್ಯಾರ್ಥಿಗಳಿಗೆ ಪ್ರಲ್ಹಾದ್ ಜೋಶಿ ಶುಭ ಹಾರೈಸಿದರು. ಈ ವೇಳೆ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ ಎಂದು ಅಭಿಪ್ರಾಯಪಟ್ಟರು. 2014ರಿಂದ 2021 ರವರೆಗೆ ದೇಶದಲ್ಲಿ ನಮ್ಮ ಹೆಮ್ಮೆಯ ಧಾರವಾಡ ಐಐಟಿ ಸೇರಿದಂತೆ ಒಟ್ಟು 7 ಹೊಸ ಐಐಟಿಗಳು ಸ್ಥಾಪನೆಗೊಂಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಇಡಿ ದೇಶವೇ ಸ್ಪಂದಿಸುತ್ತಿದೆ. ಈ ಸಂಸ್ಥೆಗಳು ಹೊಸ ಹೊಸ ವಿನ್ಯಾಸ ಮತ್ತು ತಂತ್ರಜ್ಞಾನದ ಮೂಲಕ ಈ ಅಭಿಯಾನದಲ್ಲಿ ಭಾಗಿಯಾಗಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
2016-17ರಲ್ಲಿ ದೇಶದಲ್ಲಿ ಕೇವಲ 471 ಸ್ಟಾರ್ಟ್ ಅಪ್ ಗಳಿದ್ದವು. 2022ರ ಜೂನ್ ವೇಳೆಗೆ ಇವುಗಳ ಸಂಖ್ಯೆ 72,993ಕ್ಕಿಂತ ಹೆಚ್ಚಾಗಿದೆ. ಸುಮಾರು 333 ಬಿಲಿಯನ್ ಡಾಲರ್ ಗೂ ಹೆಚ್ಚು ವಹಿವಾಟು ನಡೆಸುತ್ತಿವೆ. ಇದರಿಂದ ದೇಶದ ಆರ್ಥಿಕ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಶ್ಲಾಘನೆ ವ್ಯಕ್ತಪಡಿಸಿದರು.‌
ಮೋದಿ ನೇತೃತ್ವದ ಸರ್ಕಾರ ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸಿದ ನಂತರ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗಲಾರಂಭಿಸಿವೆ. ಇಂದು ಶಿಕ್ಷಣ ಸಂಸ್ಥೆಗಳಿಂದ ಕೇವಲ ಪದವೀಧರರಷ್ಟೇ ಅಲ್ಲದೇ, ಪರಿಪೂರ್ಣ ವ್ಯಕ್ತಿತ್ವದ, ಕೌಶಲ್ಯಪೂರ್ಣ ಹಾಗೂ ಬಾಹ್ಯ ಪೈಪೋಟಿಯನ್ನು ಸ್ಪರ್ಧಾತ್ಮಕ ಮನೋಭಾವದೊಂದಿಗೆ ಮೆಟ್ಟಿ ನಿಲ್ಲಬಲ್ಲ ವ್ಯಕ್ತಿಗಳು ಹೊರಹೊಮ್ಮುತ್ತಿರುವುದು ಸಂತೋಷದ ವಿಷಯವಾಗಿದೆ.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 65 ಯುವಜನತೆ ಇದ್ದಾರೆ. ನವಭಾರತದ ನಿರ್ಮಾಣದ ಹೊಣೆಗಾರಿಕೆ ಇವರೆಲ್ಲರದ್ದಾಗಿದೆ. ಇದಕ್ಕೆ ಪೂರಕವಾದ ವ್ಯಕ್ತಿತ್ವ ಹೊಂದಿರುವ ಯುವಶಕ್ತಿಯನ್ನು ಸಿದ್ಧಪಡಿಸುವಲ್ಲಿ ಐಐಟಿ ಹಾಗೂ ಐಐಎಂನಂಥ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ ಎಂದು ಜೋಶಿ ಅಭಿಪ್ರಾಯಪಟ್ಟರು.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply