ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಬಳಿ ಇರುವ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ, ಐವರು ಸದಸ್ಯರ ಸದನ ಸಮಿತಿಯನ್ನು ಮಹಾನಗರ ಪಾಲಿಕೆ ಗುರುವಾರ ರಚಿಸಲಾಯಿತು.
ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಸಮಿತಿಯಲ್ಲಿ ಆಡಳಿತ ಪಕ್ಷದ ಮೂವರು ಹಾಗೂ ವಿರೋಧ ಪಕ್ಷದ ಇಬ್ಬರು ಇರಲಿದ್ದಾರೆ. ನಾಗರಿಕರು, ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯಲಿರುವ ಸಮಿತಿಯು, ಆ. 29ರಂದು ಬೆಳಿಗ್ಗೆ 11ರೊಳಗೆ ನಿರ್ಧಾರ ತಿಳಿಸಲಿದೆ ಎಂದು ಮೇಯರ್ ಈರೇಶ ಅಂಚಟಗೇರಿ ಮಾಧ್ಯಮದವರಿಗೆ ತಿಳಿಸಿದರು.
ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ, ಸಮಿತಿಯು ಎಲ್ಲಾ ಆಯಾಮಗಳಿಂದಲೂ ಪರಿಶೀಲನೆ ನಡೆಸಲಿದೆ. ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗದಂತೆ ಮೂರು ದಿನದೊಳಗೆ ತೀರ್ಮಾನ ಕೈಗೊಳ್ಳಲಿದೆ. ಅದಕ್ಕೆ ಎಲ್ಲಾ ಸದಸ್ಯರು ಬದ್ಧವಾಗಿರಲಿದ್ದು, ಈ ತೀರ್ಮಾನವೇ ಮುಂದಕ್ಕೂ ಅನ್ವಯವಾಗಲಿದೆ ಎಂದು ಹೇಳಿದರು
