ಆಕಾಶ್ ಬೈಜೂಸ್ ವಿದ್ಯಾರ್ಥಿ ವೇತನ ಪರೀಕ್ಷೆ ನ.5ರಿಂದ
ಹೆಚ್ಚಿನ ಮಾಹಿತಿಗೆ anthe.aakash.ac.in ವೆಬ್‌ಸೈಟ್ ಸಂಪರ್ಕಿಸಬಹುದು
ಹುಬ್ಬಳ್ಳಿ: ‘ಆಕಾಶ್ ಬೈಜೂಸ್ ಇನ್‌ಸ್ಟಿಟ್ಯೂಟ್‌ನ ವಾರ್ಷಿಕ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪರೀಕ್ಷೆ ನ.5ರಿಂದ 13ರವರೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ನಡೆಯಲಿದೆ’ ಎಂದು ಸಂಸ್ಥೆಯ ಉಪನಿರ್ದೇಶಕ ಸುಧೀರ್ ಕುಮಾರ್ ತಿಳಿಸಿದರು.
ನಗರದಲ್ಲಿ ‘ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್’ (ಆಂಥೆ)–2022ರ ಪೋಸ್ಟರ್ ಅನಾವರಣ ಮಾಡಿದ ಅವರು, ‘ಆಂಥೆ ಅನ್ನು 7ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲಾಗುವುದು. ಶೇ 100ರವರೆಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಎಲ್ಲ ತರಗತಿಗಳ ಪೈಕಿ ಉತ್ತಮ ಸಾಧನೆ ಮಾಡುವ ಐವರಿಗೆ ಮತ್ತು ಒಬ್ಬ ಪಾಲಕರಿಗೆ ನಾಸಾಗೆ ಉಚಿತ ಪ್ರವಾಸದ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
‘ಪರೀಕ್ಷೆಗೆ ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ನ.5ರಿಂದ 13ರವರೆಗೆ ಆನ್‌ಲೈನ್ ಪರೀಕ್ಷೆಗಳು ಮತ್ತು ನ.6ರಿಂದ 13ರವರೆಗೆ ಆಫ್‌ಲೈನ್ ಪರೀಕ್ಷೆಗಳು ಸಂಸ್ಥೆಯ ಎಲ್ಲ ಕೇಂದ್ರಗಳಲ್ಲಿ ನಡೆಯಲಿವೆ. ನ.27 ಮತ್ತು 29ರಂದು ಫಲಿತಾಂಶ ಪ್ರಕಟ ಆಗಲಿವೆ’ ಎಂದರು.
‘2013ರಲ್ಲಿ ಆಂಥೆ ಆರಂಭವಾಗಿದೆ. ಈವರೆಗೆ 33 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಈ ವರ್ಷ 2 ಸಾವಿರ ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಟ್ ಮತ್ತು ಜೆಇಇ ತರಬೇತಿ ಮತ್ತು ವಿದ್ಯಾರ್ಥಿವೇತನ ನೀಡಲಾಗುವುದು’ ಎಂದು ತಿಳಿಸಿದರು.
‘90 ಅಂಕಗಳಿಗೆ ಒಂದು ಗಂಟೆಯ ಪರೀಕ್ಷೆ ನಡೆಯಲಿದೆ. ಇದರಲ್ಲಿ 35 ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ಹೆಚ್ಚಿನ ಮಾಹಿತಿಗೆ anthe.aakash.ac.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು’ ಎಂದರು.
ಸಂಸ್ಥೆಯ ಸಹಾಯಕ ನಿರ್ದೇಶಕ ಬಾಲಶ್ರೀನಿವಾಸ, ಉತ್ತರ ಕರ್ನಾಟಕ ಭಾಗದ ಕ್ಲಸ್ಟರ್ ಬಿಸಿನೆಸ್ ಮುಖ್ಯಸ್ಥ ಚಂದನ್ ಸಿಂಗ್, ಹುಬ್ಬಳ್ಳಿ ಕೇಂದ್ರದ ಉಪ ಮುಖ್ಯಸ್ಥರಾದ ಮಹಾಂತೇಶ, ಅನೂಪ್, ಅಕಾಡೆಮಿಕ್ ಮುಖ್ಯಸ್ಥರಾದ ರಾಘವೇಂದ್ರ, ಲಿಂಗಾರೆಡ್ಡಿ ಇದ್ದರು.