ಮಂಗಳೂರು : ವಾಮಂಜೂರಿನಲ್ಲಿ 1994ರಲ್ಲಿ ತನ್ನ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿ ಜೈಲಿನಲ್ಲಿರುವ ಪ್ರವೀಣ್ ಕುಮಾರ್‌ನನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಪ್ರವೀಣ್ ಪತ್ನಿ ಸೇರಿದಂತೆ ಆತನ ಕುಟುಂಬಸ್ಥರು ಮಂಗಳವಾರ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಪೊಲೀಸ್ ಆಯುಕ್ತರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವೀಣನ ಕುಟುಂಬಸ್ಥರು ಸಲ್ಲಿಸಿರುವ ಆಕ್ಷೇಪವನ್ನು ಕೂಡಲೇ ಕೇಂದ್ರ ಕಚೇರಿಗೆ ಕಳುಹಿಸಿಕೊಡಲಾಗುವುದು ಎಂದರು.
ಪ್ರವೀಣ್ ವಾಮಂಜೂರಿನಲ್ಲಿ ತನ್ನ ಅತ್ತೆ (ತಂದೆಯ ತಂಗಿ) ಅಪ್ಪಿ ಶೇರಿಗಾರ್ತಿ, ಅವರ ಮಗ ಗೋವಿಂದ, ಮಗಳು ಶಕುಂತಳಾ ಹಾಗೂ ಶಕುಂತಳಾ ಅವರ ಪುತ್ರಿ ದೀಪಿಕಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಸದ್ಯ ಹಿಂಡಲಗಾ ಜೈಲಿನಲ್ಲಿರುವ ಆತನನ್ನು ಸನ್ನಡತೆಯ ಕಾರಣ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಬಿಡುಗಡೆ ಮಾಡುವ ಉದ್ದೇಶದಿಂದ ವರದಿ ಸಂಗ್ರಹಿಸಲು ಎಸ್‌ಪಿ ಕಚೇರಿಗೆ ರಾಜ್ಯ ಕಾರಾಗೃಹ ಮತ್ತು ಸುಧಾರಣೆ ಇಲಾಖೆಯಿಂದ ಆದೇಶ ಮಾಡಲಾಗಿತ್ತು.
ರಕ್ಷಕನಾಗಬೇಕಿದ್ದವ ಜೀವ ಭಕ್ಷಕನಾದ! ಶಕುಂತಳಾ ಅವರ ಪತಿ ಮಸ್ಕತ್‌ನಿಂದ ಬರುವಾಗ ಚಿನ್ನ ತಂದಿದ್ದರು. ಅದು ಪ್ರವೀಣನಿಗೆ ಗೊತ್ತಿತ್ತು. ಇಟ್ಟಿರುವ ಜಾಗವನ್ನೂ ಅರಿತಿದ್ದ. ಅವನಿಗೆ ಜೂಜು, ಕುಡಿತದ ಚಟವಿತ್ತು. ಆತನ ಮನೆ ಉಪ್ಪಿನಂಗಡಿಯಲ್ಲಿ. ಮಂಗಳೂರಿನಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದ ಆತ ಹಲವು ವರ್ಷಗಳಿಂದ ಹೆಚ್ಚಾಗಿ ಇದ್ದುದು ವಾಮಂಜೂರಿನ ಅತ್ತೆ ಮನೆಯಲ್ಲೇ. 1994ರ ಫೆ. 23ರ ರಾತ್ರಿಯೂ ಬಂದಿದ್ದ. ಅತ್ತೆಯೇ ಪ್ರೀತಿಯಿಂದ ಊಟ ಬಡಿಸಿದ್ದರು. ಗೋವಿಂದ ಸ್ವಲ್ಪ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಮನೆಯಲ್ಲಿ ಬೇರೆ ಗಂಡಸರು ಇರಲಿಲ್ಲ. ಮನೆಗೆ ಕಾವಲಾಗಿ ಪ್ರವೀಣ ಇದ್ದಾನೆ ಎಂದು ಮನೆಯವರು ಖುಷಿಯಾಗಿದ್ದರು.
ಮಧ್ಯರಾತ್ರಿ ಪ್ರವೀಣ ಮನೆಯಲ್ಲಿದ್ದವರ ಪೈಕಿ ನಾಲ್ವರಿಗೂ ರಾಡ್‌ನಿಂದ ಹೊಡೆದು, ಕತ್ತಿಯಿಂದ ಕಡಿದು ಕೊಲೆ ಮಾಡಿದ್ದ. ಹೆಂಗಸರ ಮೈಮೇಲಿದ್ದ ಸುಮಾರು 80,000 ರೂ. ಮೌಲ್ಯದ ಚಿನ್ನ ಮತ್ತು 5,000 ರೂ. ನಗದು ದೋಚಿ ಪರಾರಿಯಾಗಿದ್ದ.
ನಾನು ಆತನ ಜತೆ ಸ್ವಲ್ಪ ಸಮಯ ಮಾತ್ರ ಜೀವನ ನಡೆಸಿದ್ದೇನೆ. ಆ ಕೊಲೆಗಡುಕನನ್ನು ಬಿಡಬಾರದೆಂದು ಈ ಹಿಂದೆಯೂ ಹೇಳಿದ್ದೇನೆ. ಅವನು ಜೈಲಿನಲ್ಲಿಯೇ ಇರಲಿ’ ಎಂದು ಪ್ರವೀಣ್ ಮೊದಲ ಪತ್ನಿ ಆಗ್ರಹಿಸಿದ್ದಾರೆ.