ನವದೆಹಲಿ : ಕ್ರಿಕೆಟ್ ಜಗತ್ತಿನಲ್ಲಿ ಅದ್ಭುತ ಅಂಪೈರ ಆಗಿ ಕಾರ್ಯ ನಿರ್ವಹಿಸಿದ್ದ ರೂಢಿ ಕೋರ್ಟ್ಜನ್ ಇನ್ನೂ ನೆನಪು ಮಾತ್ರ. ಹೌದು, ಕ್ರಿಕೆಟಿಗರಷ್ಟೇ ಖ್ಯಾತಿ ಪಡೆದಿದ್ದ ದಕ್ಷಿಣ ಆಫ್ರಿಕಾ ಮೂಲದ ಅಂಪೈರ್ ರೂಡಿ ಕೋರ್ಟ್ಜನ್ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ರೂಡಿ ಕೋರ್ಟ್ಜನ್ ಮತ್ತು ಮೂವರು ಸ್ನೇಹಿತರು ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ಎಲ್ಲರೂ ಸ್ಥಳದಲ್ಲೇ ಅಸುನೀಗಿದ್ದಾರೆ. ಗಾಲ್ಫ್ ಟೂರ್ನಮೆಂಟ್ ಒಂದಕ್ಕೆ ಕೋರ್ಟ್ಜನ್ ಸ್ಪರ್ಧಿಯಾಗಿ ತೆರಳಿದ್ದರು. ವಾಪಸ್ ಬರುವಾಗ ಅಪಘಾತವಾಗಿದೆ ಎಂದು ಅವರ ಮಗ ಮಾಹಿತಿ ನೀಡಿದ್ದಾರೆ.
ರೂಡಿ ಕೋರ್ಟ್ಜನ್ ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು 2010ರಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ನಿವೃತ್ತಿ ಘೋಷಿಸಿದ್ದರು. ಅವರ ನಿವೃತ್ತಿ ಕ್ರಿಕೆಟಿಗರಿಗೆ ಮತ್ತು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು. ಅತ್ಯಂತ ನಿಖರ ನಿರ್ಧಾರಗಳನ್ನು ನೀಡುತ್ತಿದ್ದ ಕೋರ್ಟ್ಜನ್ ಅವರನ್ನು ಕಂಡರೆ ಕ್ರಿಕೆಟಿಗರಲ್ಲಿ ಅಪಾರ ಗೌರವವಿತ್ತು. ಡಿಆರ್‌ಎಸ್ ಪದ್ಧತಿ ಇಲ್ಲದ ಕಾಲದಲ್ಲಿ, ನಿಖರವಾದ ತೀರ್ಪು ನೀಡುತ್ತಿದ್ದ ಅಂಪೈರ್‌ಗಳ ಪಟ್ಟಿಯಲ್ಲಿ ಕೋರ್ಟ್ಜನ್‌ರಿಗೆ ಉನ್ನತ ಸ್ಥಾನವಿತ್ತು.
ಕೆಲ ಸ್ನೇಹಿತರ ಜೊತೆ ಅವರು ಗಾಲ್ಫ್ ಟೂರ್ನಮೆಂಟ್‌ಗೆ ತೆರಳಿದ್ದರು. ಬರುವ ವೇಳೆ ಅಪಘಾತವಾಗಿದೆ ಎಂದು ಕೋರ್ಟ್ಜನ್ ಅವರ ಮಗ ಕೋರ್ಟ್ಜನ್ ಜೂನಿಯರ್ ಅಲ್ಗೋವಾ ಹೇಳಿದ್ದಾರೆ.
ಬಾಲ್ಯದಿಂದಲೂ ಕೋರ್ಟ್ಜನ್ ಅವರಿಗೆ ಕ್ರಿಕೆಟ್‌ನ ಮೇಲೆ ಅಭಿಮಾನವಿತ್ತು. ದಕ್ಷಿಣ ಆಫ್ರಿಕಾ ರೈಲ್ವೇ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಕೋರ್ಟ್ಜನ್, ಲೀಗ್‌ಗಳಲ್ಲಿ ಕ್ರಿಕೆಟ್ ಆಡುತ್ತಿದ್ದರು. 1981ರಲ್ಲಿ ಕರ್ಜನ್ ಅಂಪೈರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂಪೈರಿಂಗ್ ಆರಂಭಿಸಿದರು. ಅದಾದ ಹತ್ತು ವರ್ಷಗಳ ನಂತರ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
1992ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಮೂಲಕ ಟೆಸ್ಟ್ ಪಾದಾರ್ಪಣೆ ಮಾಡಿದರು. ಒಟ್ಟಾರೆ 209 ಏಕದಿನ ಪಂದ್ಯಗಳು, 14 ಟಿ-ಟ್ವೆಂಟಿ ಪಂದ್ಯಗಳಿಗೆ ಅವರು ಅಂಪೈರಿಂಗ್ ಮಾಡಿದ್ದಾರೆ.
ಒಟ್ಟು 331 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಅಂಪೈರಿಂಗ್ ಮಾಡಿದ್ದಾರೆ. 2010ರಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ವೃತ್ತಿ ಬದುಕಿಗೆ ವಿದಾಯ ಹೇಳಿದರು. ಆ ವೇಳೆ, ಟೆಸ್ಟ್ ಕ್ರಿಕೆಟ್ ಅನ್ನು ಮಿಸ್ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದರು.