ಬೆಂಗಳೂರು : ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಭರ್ಜರಿ ಯಶಸ್ಸಿನಿಂದ ಬೀಗುತ್ತಿರುವ ಕರ್ನಾಟಕ ಕಾಂಗ್ರೆಸ್ ಮತ್ತೊಂದು ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ವಹಿಸಿಕೊಂಡಿದ್ದಾರೆ.
ಇದೊಂದು ಪಕ್ಷಾತೀತ ಕಾರ್ಯಕ್ರಮ ಎಂದು ಡಿಕೆಶಿ ಹೇಳುತ್ತಿದ್ದರೂ, ಸಿದ್ದರಾಮಯ್ಯನವರ ನಂತರ ಶಕ್ತಿ ಪ್ರದರ್ಶನಕ್ಕೆ ವೇದಿಕೆಯನ್ನಾಗಿ ರೂಪಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕ ಬೃಹತ್ ಪಾದಯಾತ್ರೆಯನ್ನು ನಡೆಸಲು ಪೂರ್ವಭಾವಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಆಗಸ್ಟ್ ಹದಿನೈದರಂದು ನಡೆಸಲು ಉದ್ದೇಶಿಸಲಾಗಿರುವ ಪಾದಯಾತ್ರೆ ಮತ್ತು ನಂತರದ ಸಭೆಗೆ ಒಂದು ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ.
ಬಿಜೆಪಿಯ ಘರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಕೌಂಟರ್ ನೀಡಲು ಈ ಕಾರ್ಯಕ್ರಮವನ್ನು ಕೆಪಿಸಿಸಿ ಆಯೋಜಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಸಡ್ಡು ಹೊಡೆಯಲು ಅಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.