https://youtu.be/ivxB_iQ7GEw
ಹುಬ್ಬಳ್ಳಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಕೋವಿಡ್ ಸಂದರ್ಭದಲ್ಲಿ ಕೈಗಾರಿಕೆಗಳು ಜನರ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದ್ದರು. ಅದರಂತೆ ದೇಶದ ಕೈಗಾರಿಕೋದ್ಯಮಿಗಳು ಕೋವಿಡ್ ನಿರ್ವಹಣೆಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ವೇದಾಂತ ಸಂಸ್ಥೆ ಅತಿ ಕಡಿಮೆ ಸಮಯದಲ್ಲಿ ಕರ್ನಾಟಕದಲ್ಲಿ ಎರೆಡು ಕೋವಿಡ್ ಆಸ್ಪತ್ರೆಗಳನ್ನು ತೆರೆದು ಜನರಿಗೆ ನೆರವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿ
ವೇದಾಂತ ಸಂಸ್ಥೆ ನಿರ್ಮಿಸಿರುವ 100 ಬೆಡ್‌ಗಳ ಕೋವಿಡ್ ಫೀಲ್ಡ್ ಆಸ್ಪತ್ರೆ ಉದ್ಘಾಟಸಿ ಅವರು ಮಾತನಾಡಿದರು.
ವೇದಾಂತ ಸಂಸ್ಥೆಯ ಅನಿಲ್ ಅಗರವಾಲ್ ಕೇಂದ್ರ ಸರ್ಕಾರದ ಕೋರಿಕೆ ಮನ್ನಿಸಿ ರಾಜ್ಯದ ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ಕೋವಿಡ್ ಆಸ್ಪತ್ರೆ ನಿರ್ಮಿಸಿದ್ದಾರೆ. ಅವರಿಗೆ ಧನ್ಯವಾದಗಳು. ಹುಬ್ಬಳ್ಳಿ ಆಸ್ಪತ್ರೆ 20 ಐಸಿಯು ಮತ್ತು 80 ಆಕ್ಸಿಜನ್ ಬೆಡ್‌ಗಳನ್ನು ಹೊಂದಿದೆ. ಆಸ್ಪತ್ರೆ ನಿರ್ವಹಣೆ ಕೂಡ ವೇದಾಂತ ಸಂಸ್ಥೆ ನಿರ್ವಹಿಸುತ್ತಿದೆ. ಕಿಮ್ಸ್‌ನಿಂದ ವೈದ್ಯರನ್ನು ನೇಮಿಸಲಾಗುವುದು. ಆಸ್ಪತ್ರೆ 10 ವರ್ಷಗಳು ಬಾಳಿಕೆ ಬರಲಿದೆ ಎಂದರು.
ಕೋವಿಡ್ ಎರಡನೇ ಅಲೆ ಬಹಳಷ್ಟು ಆಂತಕ ಉಂಟುಮಾಡಿದೆ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಪ್ರಧಾನಿಯವರು ಹಲವಾರು ಮಂತ್ರಿಗಳ ನೇತೃತ್ವದಲ್ಲಿ ಕೋವಿಡ್ ನಿರ್ವಹಣೆಗೆ ಸಮಿತಿ ನೇಮಿಸಿದ್ದರು. ಅದರಲ್ಲಿ ನಾನು ಕೂಡ ಸಕ್ರಿಯವಾಗಿ ಕೆಲಸ ನಿರ್ವಹಿಸಿದ್ದೇನೆ. ಸರ್ಕಾರಕ್ಕೆ ಯಾವ ತಾಂತ್ರಿಕ ತಜ್ಞರ ಸಮಿತಿ ಕೋವಿಡ್ ಅಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬರಲಿದೆ. ಆಕ್ಸಿಜನ್ ಬೇಡಿಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಹೇಳಿರಲಿಲ್ಲ. ಕೋವಿಡ್ ಪೂರ್ವದಲ್ಲಿ ಆಮ್ಲಜನಕದ ಬೇಡಿಕೆ 900 ಟನ್ ಇತ್ತು.
ಏಪ್ರಿಲ್ ತಿಂಗಳ ಕೋವಿಡ್ ಆರಂಭದಲ್ಲಿ ದೇಶದಲ್ಲಿ ವೈದ್ಯಕೀಯ ಆಮ್ಲಜನಕ ಬೇಡಿಕೆ 9000 ಟನ್, ಇದು ಏಪ್ರಿಲ್ ಮಧ್ಯ ಭಾಗದಲ್ಲಿ 17000 ಟನ್ ಏರಿಕೆಯಾಯಿತು. ಕೆಲವೇ ದಿನಗಳ ಭಾರತದಲ್ಲಿ ಮೊದಲಿಗಿಂತಲೂ 10 ಪಟ್ಟು ಹೆಚ್ಚಿನ ಆಮ್ಲಜನಕ ಉತ್ಪಾದನೆ ಮಾಡಲಾಯಿತು. ಕ್ರಯೋಜನಿಕ್ ಕೊರತೆಯಿಂದ ಆಮ್ಲಜನಕದ ಸರಬಾರಜು ಅತಿ ದೊಡ್ಡ ಸಮಸ್ಯೆಯಾಗಿ ತಲೆದೊರಿತು. ದೇಶದಲ್ಲಿ 400 ಕ್ಕೂ ಹೆಚ್ಚು ರೈಲಿನ ಮೂಲಕ 28470 ಮೆಟ್ರಿಕ್ ಟನ್ ಆಮ್ಲಜನಕ ಸರಬರಾಜು ಮಾಡಲಾಗುತ್ತಿದೆ. ಕರ್ನಾಟಕಕ್ಕೆ 31 ಎಕ್ಸ್‌ಪ್ರೆಸ್ ರೈಲಿನ ಮೂಲಕ 3645 ಮೆಟ್ರಿಕ್ ಆಮ್ಲಜನಕ ಸರಬರಾಜು ಮಾಡಲಾಗಿದೆ. ಕೇಂದ್ರ ಸರ್ಕಾರ ಪಿ.ಎಂ.ಕೇರ್ ಮೂಲಕ ಆಮ್ಲಜನಕ ಘಟಕ ನಿರ್ಮಾಣಕ್ಕೆ ಅನುದಾನ ಒದಗಿಸಿದೆ. ಕೇಂದ್ರ ಸರ್ಕಾರದ ಅಡಿಯ ಉದ್ದಿಮೆಗಳಿಂದ ಕರ್ನಾಟಕ ರಾಜ್ಯದ 45 ಆಸ್ಪತ್ರೆಗಳಿಗೆ ಗಾಳಿಯಿಂದ ಆಮ್ಲಜನಕ ಉತ್ಪಾದನೆ ಮಾಡುವ ಘಟಕಗಳನ್ನು ನಿರ್ಮಿಸಲಾಗಿದೆ. ಇದು ಮುಂದಿನ ಕೋವಿಡ್ ಅಲೆ ಎದುರಿಸಲು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ
ಬಸವರಾಜ್ ಹೊರಟ್ಟಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಅಮೃತ್ ದೇಸಾಯಿ, ಪ್ರದೀಪ್ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ, ವೇದಾಂತ ಸಂಸ್ಥೆಯ ಸಿಇಓ ಸಾವಿಕ್ ಮಜುಂದಾರ್, ಸುಜಲ್ ಷಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.