ಹಾಸನ : ಬೈಕ್ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸವಾರನೊಬ್ಬ ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.
ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿರುವಂತೆಯೇ ಮಳೆ ಸಂಬಂಧಿತ ದುರಂತಗಳ ಸರಣಿ ಮುಂದುವರೆದಿದೆ. ನಿನ್ನೆ ಬೆಂಗಳೂರಿನಲ್ಲಿ ಕಟ್ಟಡ ಕುಸಿದ ಬೆನ್ನಲ್ಲೇ ಇತ್ತ ಹಾಸನದಲ್ಲಿ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸವಾರನೊಬ್ಬ ಸಾವನ್ನಪ್ಪಿದ್ದಾನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ರಸ್ತೆಯ ಮಾಳೆಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭಾರೀ ಗಾಳಿ, ಮಳೆಯಿಂದಾಗಿ ಬೈಕ್ ಸವಾರನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದೆ. ಈ ವೇಳೆ ಮರದಡಿಯಲ್ಲಿ ಸಿಲುಕಿದ ಬೈಕ್ ಸವಾರ ನರಳಾಡಿ ಪ್ರಾಣ ಬಿಟ್ಟಿದ್ದಾನೆ.
ಕಲ್ಲೇಸೋಮನಹಳ್ಳಿ ಗ್ರಾಮದ ರಂಗಶೆಟ್ಟಿ (40) ಮೃತ ದುರ್ದೈವಿ. ಚನ್ನರಾಯಪಟ್ಟಣದಿಂದ ಬೈಕ್‍ನಲ್ಲಿ ಕಲ್ಲೇಸೋಮನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೃಹತ್ ಗಾತ್ರದ ಮರವೊಂದು ರಂಗಶೆಟ್ಟಿ ಮೇಲೆ ಬಿದ್ದಿದೆ. ಬೈಕ್ ಹಾಗೂ ಮರದ ನಡುವೆ ಸಿಲುಕಿದ ರಂಗಶೆಟ್ಟಿ ಅರ್ಧಗಂಟೆಗೂ ಹೆಚ್ಚು ಹೊತ್ತು ನರಳಾಡಿ ರಕ್ಷಿಸುವಂತೆ ಅಂಗಲಾಚಿದ್ದಾರೆ. ಈ ವೇಳೆ ಕೂಡಲೇ ಸ್ಥಳೀಯರು ನೆರವಿಗೆ ಧಾವಿಸಿದ್ದು, ರಂಗಶೆಟ್ಟಿಯನ್ನು ರಕ್ಷಿಸಲು ಮಾತ್ರ ಸಾಧ್ಯವಾಗಿಲ್ಲ. ಸ್ಥಳಕ್ಕೆ ಆಸ್ಪತ್ರೆಯ ಸಿಬ್ಬಂದಿ ಬಂದು ಪ್ರಥಮ ಚಿಕಿತ್ಸೆ ನೀಡಿದ್ದಾದರೂ ಜೀವಂತವಾಗಿ ಉಳಿಸಲು ಸಾಧ್ಯವಾಗಲಿಲ್ಲ.
ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ 2 ಜೆಸಿಬಿ, ಹಿಟಾಚಿ ಯಂತ್ರ ಬಳಸಿ ರಂಗಶೆಟ್ಟಿ ಮೃತದೇಹವನ್ನು ಹೊರತೆಗೆದರು.