ಗೋಕರ್ಣ : ಮಳೆ ಬರಲೆಂದು ಕಪ್ಪೆಗಳಿಗೆ ಮದುವೆ ಮಾಡಿಸುವುದು ಕೇಳಿದ್ದೇವೆ. ಇನ್ನು ಹಲವು ಕಡೆ ಹಲವು ಸಂಪ್ರದಾಯಗಳಿವೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಮಳೆದೇವ ಇಂದ್ರನನ್ನು ಸಂತೃಪ್ತಿಗೊಳಿಸಲು ಹಾಲಕ್ಕಿ ಒಕ್ಕಲಿಗ ಸಮುದಾಯದವರು ಇಬ್ಬರು ಮಹಿಳೆಯರ ಮಧ್ಯೆ ಮದುವೆ ಮಾಡಿಸುತ್ತಾರೆ. ಮಳೆ, ಬೆಳೆ ಚೆನ್ನಾಗಿ ಆಗಿ ಸಂತೃಪ್ತಿ, ಸಂತೋಷ ಸಮಾಜದಲ್ಲಿ ನೆಲೆಸಲಿ ಎಂಬುದು ಇದರ ಸಾಂಕೇತಿಕ ಅರ್ಥವಾಗಿದೆ.
ಗೋಕರ್ಣದ ಹತ್ತಿರ ತಾರಮಕ್ಕಿ ಗ್ರಾಮದಲ್ಲಿ ಹುಲಸ್ಕೆರೆ ಹಾಲಕ್ಕಿ ಸಮುದಾಯದ ಸದಸ್ಯರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ವರ್ಣರಂಜಿತ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಜಾನಪದ ಸಂಗೀತ ಮತ್ತು ಗಾಯನ ಮಧ್ಯೆ ಈ ಅಪರೂಪದ ಮದುವೆ ಕಾರ್ಯಕ್ರಮ ನಡೆಯಿತು.
ಗ್ರಾಮಸ್ಥರೆಲ್ಲಾ ಸೇರಿ ಕೇತಕಿ ವಿನಾಯಕ ದೇವಸ್ಥಾನ ಬಳಿ ಮೆರವಣಿಗೆ ತಂಗಿ ಮತ್ತೊಂದು ಬುಡಕಟ್ಟು ಸಮುದಾಯದ ದೇವತೆಯಾದ ಕರಿದೇವರು ಜೊತೆಗೂಡಿ ವಿಶಿಷ್ಟ ಮದುವೆ ನೆರವೇರಿಸಿದರು.