ಮಂಗಳೂರು : ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಮೂವರು ಯುವಕರ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಾಳೆಯಿಂದಲೇ ಹೊಸ ನಿಯಮ ಜಾರಿಗೆ ಬರಲಿದೆ. ದ್ವಿಚಕ್ರವಾಹನದಲ್ಲಿ ಪುರುಷ ಹಿಂಬದಿ ಸವಾರರಿಗೆ ಅವಕಾಶವಿಲ್ಲ ಎಂದು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಈ ನಿಯಮ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಪುರುಷ ಹಿಂಬದಿ ಸವಾರರು ಬೈಕ್ ನಲ್ಲಿ ತೆರಳುವಂತಿಲ್ಲ, ಬೈಕ್ ನಲ್ಲಿ ಹಿಂಬದಿ ಸೀಟ್ ನಲ್ಲಿ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಮಾತ್ರ ತೆರಳಬಹುದು. 1 ವಾರಗಳ ಕಾಲ ಈ ನಿಯಮವನ್ನು ಜಿಲೆಯಾದ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುವುದು. ಹಿಂಸೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೇರೆ ರಾಜ್ಯದಲ್ಲಿಯೂ ಈ ನಿಯಮ ಜಾರಿಗೆ ತರಲಾಗಿತ್ತು. ಅದರಂತೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಹೊಸ ನಿಯಮ ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.