ಹುಬ್ಬಳ್ಳಿ; ತಮ್ಮ ಆರ್ಥಿಕ ಸದೃಢತೆ ಜೊತೆಗೆ ತಮ್ಮ ಸುತ್ತಮುತ್ತಲಿನ ಜನರ ಆರ್ಥಿಕ ಸುಧಾರಣೆಗೆ ಒತ್ತು- ಜಯಪ್ರಕಾಶ ಹೆಗ್ಡೆ ಅಭಿಪ್ರಾಯಪಟ್ಟರು.ಧಾರವಾಡ ಬಂಟರ ಸಂಘದ ವತಿಯಿಂದ ಇಲ್ಲಿನ ಆರ್.ಎನ್. ಶೆಟ್ಟಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಬಂಟರ ಭಾವೈಕ್ಯ ಸಮಾರಂಭದಲ್ಲಿ ಅವರು ಮಾತನಾಡಿದರು.ಬಂಟರ ಸಂಘದಿಂದ ಮೀಸಲಾತಿಗೆ ಸಂಬಂಧಿಸಿದಂತೆ ಅರ್ಜಿಗಳು ಬರುತ್ತಿವೆ. ಅರ್ಜಿ ನೀಡುವುದರಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಬಂಟರ ಸಮಾಜದ ಜನಸಂಖ್ಯೆ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಯ ವರದಿಯನ್ನು ಸಮಾಜದ ಮುಖಂಡರು ನೀಡಬೇಕು.
‘ವರದಿಯ ಆಧಾರದ ಮೇಲೆ ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲರೂ 2ಎ ಕೇಳಿದರೆ, 3ಬಿನಲ್ಲಿ ಯಾರು ಉಳಿಯುತ್ತಾರೆ ಎನ್ನುವ ಪ್ರಶ್ನೆ ಮೂಡುತ್ತದೆ. 2ಎಗೆ ಶೇ 15ರಷ್ಟು ಮೀಸಲಾತಿ ಇದೆ. ಜಾತಿ ಮತ್ತು ಉಪಜಾತಿ ಸೇರಿದರೆ ಇದರಲ್ಲಿ 400 ಜಾತಿಗಳು ಇವೆ. 3ಬಿಯಲ್ಲಿ ಶೇ5ರಷ್ಟು ಮೀಸಲಾತಿ ಇದೆ. 2ಎ ನಲ್ಲಿ ಕುಲಕಸುಬನ್ನು ನೋಡುತ್ತಾರೆ’ ಎಂದರು.
‘ನಮ್ಮ ಮಕ್ಕಳು ಯಾವ ವರ್ಗಕ್ಕೆ ಹೋದರೆ ಎಷ್ಟು ಸ್ಪರ್ಧೆ ಆಗುತ್ತದೆ ಎನ್ನುವುದನ್ನು ಚಿಂತಿಸಬೇಕಾಗುತ್ತದೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10ರಷ್ಟು ಮೀಸಲಾತಿಯನ್ನು ನೀಡುತ್ತಿದೆ. ಹೀಗಾಗಿ, ಗೊಂದಲ ಬೇಡ. ಕೇಂದ್ರದ ಪಟ್ಟಿಯಲ್ಲಿ ಬಂಟರು ಇಲ್ಲದಿದ್ದರೂ, ಆರ್ಥಿಕವಾಗಿ ಹಿಂದುಳಿದಿದ್ದರೆ, ಶೇ10ರಷ್ಟು ಈ ಮೀಸಲಾತಿ ಸಿಗುತ್ತದೆ’ ಎಂದು ಹೇಳಿದರು.
ಬೆಳಗಾವಿಯ ಉದ್ಯಮಿ ವಿಠ್ಠಲ ಹೆಗಡೆ, ಹುಬ್ಬಳ್ಳಿ- ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿದರು. ಗಂಗಾವತಿ ಪ್ರಾಣೇಶ ಹಾಗೂ ಬಸವರಾಜ ಮಹಾಮನೆ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. ವಿವಿಧ ಜಿಲ್ಲೆಯ ಬಂಟರ ಸಮುದಾಯದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ ಶೆಟ್ಟಿ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಗುರ್ಮೆ ಸುರೇಶ ಶೆಟ್ಟಿ, ಹುಬ್ಬಳ್ಳಿ– ಧಾರವಾಡ ಬಂಟರ ಸಂಘದ ಉಪಾಧ್ಯಕ್ಷರಾದ ಬಿ.ಶಾಂತರಾಮ ಶೆಟ್ಟಿ, ಪ್ರದೀಪ ಪಕ್ಕಳ, ಕಾರ್ಯದರ್ಶಿ ಸತೀಶ ಶೆಟ್ಟಿ, ಕೋಶಾಧಿಕಾರಿ ಸುಧೀರ ಶೆಟ್ಟಿ, ಉಪ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ದಿನೇಶ ಶೆಟ್ಟಿ, ಸತೀಶ ಚಂದ್ರಶೆಟ್ಟಿ, ಸಂತೋಷ ಶೆಟ್ಟಿ, ವಿಶ್ವನಾಥ ಶೆಟ್ಟಿ, ಅಶೋಕ ಕುಮಾರ ಶೆಟ್ಟಿ ಇದ್ದರು.