ಹುಬ್ಬಳ್ಳಿ: ಅತ್ಯುತ್ತಮ ಶಸ್ತ್ರಚಿಕಿತ್ಸಾ ವಿಡಿಯೊಗಾಗಿ ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ. ಶ್ರೀನಿವಾಸ ಎಂ. ಜೋಶಿ ಅವರು, ಅಮೆರಿಕದ ಪ್ರತಿಷ್ಠಿತ ‘ರೆಟ್ ಬಕ್ಲರ್’ ಪ್ರಶಸ್ತಿಯನ್ನು ಸತತ ಆರನೇ ಸಲ ಪಡೆದಿದ್ದಾರೆ. ನ್ಯೂಯಾರ್ಕ್‌ನಲ್ಲಿ ಇತ್ತೀಚೆಗೆ ನಡೆದ ಅಮೆರಿಕನ್ ಸೊಸೈಟಿ ಆಫ್ ರೆಟಿನಲ್ ಸ್ಪೆಷಲಿಸ್ಟ್ (ಎಎಸ್‌ಆರ್‌ಎಸ್) ಸಮ್ಮೇಳನದಲ್ಲಿ ಸಂಸ್ಥೆಯ ಫಿಲ್ಮ್ ಫೆಸ್ಟಿವಲ್ ವಿಭಾಗದ ಮುಖ್ಯಸ್ಥ ಡಾ. ಜಾನೆತನ್ ಚಾಂಗ್ ಪ್ರಶಸ್ತಿ ಪ್ರದಾನ ಮಾಡಿದರು.
ಎಎಸ್‌ಆರ್‌ಎಸ್ ಉತ್ತರ ಅಮೆರಿಕ ಸೇರಿದಂತೆ ಪ್ರಪಂಚದಾದ್ಯಂತದ ಇರುವ ಅತ್ಯುತ್ತಮ ರೆಟಿನಲ್ ಶಸ್ತ್ರಚಿಕಿತ್ಸಕರನ್ನು ಒಳಗೊಂಡ ಜಾಗತಿಕ ಸಂಸ್ಥೆಯಾಗಿದೆ. ಸಮ್ಮೇಳನದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಪೈಕಿ ವಿಡಿಯೊ ಸ್ಪರ್ಧೆಯೂ ಒಂದು. ಇದರಲ್ಲಿ ಹೆಸರಾಂತ ವಿಟ್ರೊ-ರೆಟಿನಲ್ ಶಸ್ತ್ರಚಿಕಿತ್ಸಕರು ಭಾಗವಹಿಸುತ್ತಾರೆ.
‘ರೆಟಿನಾದ ತೊಂದರೆಗಳನ್ನು ನಿವಾರಿಸಲು ಅತ್ಯುತ್ತಮ ಶಸ್ತ್ರಚಿಕಿತ್ಸಾ ಕ್ರಮಗಳನ್ನು ಪ್ರದರ್ಶಿಸುತ್ತಾರೆ. ಅದರಲ್ಲಿ ಅತ್ಯುತ್ತಮ ವಿಡಿಯೊಗೆ ‘ರೆಟ್ ಬಕ್ಲರ್’ ಪ್ರಶಸ್ತಿ ನೀಡಲಾಗುತ್ತದೆ. ಇದಕ್ಕೆ ರೆಟಿನಲ್ ಶಸ್ತ್ರಚಿಕಿತ್ಸೆಯ ಆಸ್ಕರ್ ಎಂತಲೂ ಕರೆಯುತ್ತಾರೆ. ಜೋಶಿ ಅವರು ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದಿರುವ ಏಕೈಕ ಭಾರತೀಯ ರೆಟಿನಲ್ ಶಸ್ತ್ರಚಿಕಿತ್ಸಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ’ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಾ. ಶ್ರೀನಿವಾಸ ಜೋಶಿ, ‘ಎಎಸ್‌ಆರ್‌ಎಸ್ ವಾರ್ಷಿಕ ಸಮ್ಮೇಳನದಲ್ಲಿ ಸತತವಾಗಿ ಆರನೇ ಬಾರಿಗೆ 8 ಪೌಂಡ್‌ನ 24 ಕ್ಯಾರೆಟ್ ಚಿನ್ನ ಲೇಪಿತ ಪ್ರತಿಮೆಯ ರೆಟ್ ಬಕ್ಲರ್ ಪ್ರಶಸ್ತಿ ಪಡೆಯುತ್ತಿರುವುದು ನನ್ನ ಅದೃಷ್ಟವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Check Also
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ
Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …