ಹುಬ್ಬಳ್ಳಿ;ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ನಿವೃತ್ತಿ ಘೋಷಿಸಬಾರದು. ಅವರಿಗೆ ಇನ್ನೂ ರಾಜಕೀಯ ಶಕ್ತಿ ಇದ್ದರೂ, ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಿದರು. ಅವರ ನಾಯಕತ್ವದಲ್ಲೇ ಪಕ್ಷ ಹೆಚ್ಚು ಸೀಟುಗಳನ್ನು ಗೆದ್ದಿತ್ತೇ ವಿನಾ ಮತ್ತೊಬ್ಬರ ಹೆಸರಿನಿಂದಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಬಿಎಸ್‌ವೈ ನಿವೃತ್ತಿ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಯಡಿಯೂರಪ್ಪ ಅವರ ಹೆಸರಲ್ಲೇ ಆಪರೇಷನ್ ಕಮಲ ಮಾಡಿ, ಬಿಜೆಪಿಯವರು ಅಧಿಕಾರ ಹಿಡಿದರು. ಕಡೆಗೆ ಅವರೇ ಕಣ್ಣೀರು ಹಾಕಿಕೊಂಡು ರಾಜಭವನಕ್ಕೆ ಹೋಗಿ, ರಾಜೀನಾಮೆ ಕೊಟ್ಟು ಬರುವಂತೆ ಮಾಡಿದರು’ ಎಂದರು.
‘ಯಡಿಯೂರಪ್ಪ ಅವರು ಎಷ್ಟೇ ನೊಂದರೂ ತಮ್ಮ ಪಕ್ಷದ ಪರವಾಗಿ ಅಭಿಮಾನದಿಂದಲೇ ಮಾತನಾಡಿಕೊಂಡು ಬಂದಿದ್ದಾರೆ. ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದಾರೆ. ಅವರು ಅನುಭವಿಸುತ್ತಿರುವ ನೋವು ಮತ್ತು ಕಿರುಕುಳ ಅವರಿಗೇ ಗೊತ್ತು. ಮಾನಸಿಕವಾಗಿ ಅವರೀಗ ಕುಗ್ಗಿದ್ದಾರೆ. ಆದರೆ, ಬಿಜೆಪಿ ಮಾತ್ರ ಅವರನ್ನು ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಬಿಸಾಕಿದೆ’ ಎಂದು ಮರುಕ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಅವರು ಚರಕ ದೇಶದ ಆಸ್ತಿ, ಗಾಂಧೀಜಿ ದೇಶಕ್ಕೆ ಬಳುವಳಿಯಾಗಿ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದ ಅವರು, ಬಿಜೆಪಿ ಸರ್ಕಾರ ರಾಷ್ಟ್ರಧ್ವಜವನ್ನು ಪಾಲಿಸ್ಟರ್ ಬಟ್ಟೆಗಳಿಂದ ಮಾಡಬಹುದು ಎಂದು ಅನುಮತಿ ನೀಡಿದೆ. ಇದು ದೇಶಕ್ಕೆ ಅವಮಾನ. ಪ್ರತಿ ಮನೆಯಲ್ಲಿ ರಾಷ್ಟ್ರ ಬಾಹುಟ ಹಾಕುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಧ್ವಜ ತಯಾರಿಕೆ ವಿಷಯದಲ್ಲಿ ಕಾನೂನು ವಿರೋಧಿಸಿ ನಡೆಯುತ್ತಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರ ಕೂಡಲೇ ರಾಷ್ಟ್ರಧ್ವಜ ತಯಾರಿಕೆ ಕುರಿತಾದ ಆದೇಶವನ್ನು ವಾಪಾಸ್ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಪ್ರತಿ ಮನೆಯಲ್ಲಿ ಖಾದಿ ರಾಷ್ಟ್ರ ಧ್ವಜ ಹಾರಿಸಬೇಕೆಂದು ಹೇಳಿದರೇ ಮೆಕ್ ಇನ್ ಇಂಡಿಯಾ ಅರ್ಥಕ್ಕೆ ಗೌರವ ಬರತ್ತಾ ಇತ್ತು. ಇದೀಗ ಸ್ವದೇಶ ಬಿಟ್ಟು ವಿದೇಶದ ಚಿಂತನೆ ಖಂಡನೀಯ ಎಂದರು.
ಕಾಂಗ್ರೆಸ್ ನಾಯಕ ರಮೇಶ ಕುಮಾರ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇವೆ. ಅವರು ಸೋನಿಯಾಗಾಂಧಿ ವಿಚಾರವಾಗಿ ತಪ್ಪು ಮಾತಾಡಿಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿದೆ. ನೆಹರೂ ಕುಟುಂಬದ ತ್ಯಾಗ, ಸಾಧನೆಯನ್ನು ಹೇಳಿದ್ದಾರೆ ಎಂದರು.
75 ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ ಅಗಸ್ಟ್ 15 ರಂದು ರಾಷ್ಟ್ರವ್ಯಾಪಿ ಕಾಂಗ್ರೆಸ್ ಪಕ್ಷದಿಂದ ಸ್ವತಂತ್ರ ನಡಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಕ್ಷಾತೀತವಾಗಿ ಭಾಗಿಯಾಗಲು ಕರೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
