ಶೂನ್ಯ ನೆರಳಿನ ದಿನ’ ಕಾರ್ಯಾಗಾರ ನಾಳೆಯಿಂದ- ಪ್ರಾಚಾರ್ಯ ಸುಭಾಷ ಎಮ್ಮಿ
ಖಗೋಳ ವಿಜ್ಞಾನದ ಕುರಿತು ತಜ್ಞರು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ
ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಕಾಡಸಿದ್ಧೇಶ್ವರ ಕಲಾ ಮತ್ತು ಕೆ.ಎಸ್. ಕೋತಂಬರಿ ಸೈನ್ಸ್ ಕಾಲೇಜಿನಲ್ಲಿ ಇದೇ 21, 22ರಂದು ‘ಶೂನ್ಯ ನೆರಳಿನ ದಿನ’ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ’ ಎಂದು ಕಾಲೇಜಿನ ಪ್ರಭಾರ ಪ್ರಾಚಾರ್ಯ ಸುಭಾಷ್ ಯೆಮ್ಮಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭೌತ ವಿಜ್ಞಾನ ವಿಭಾಗದಿಂದ ನಡೆಯಲಿರುವ ಈ ಕಾರ್ಯಾಗಾರವನ್ನು 21ರಂದು ಬೆಳಿಗ್ಗೆ 10.35ಕ್ಕೆ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಕೇಶವ ರಾಜಪುರೆ ಉದ್ಘಾಟಿಸಲಿದ್ದಾರೆ. ವಿಜ್ಞಾನ ಶಿಕ್ಷಕರಿಗಾಗಿ ಆಯೋಜಿಸಿರುವ ಕಾರ್ಯಾಗಾರದಲ್ಲಿ ಖಗೋಳ ವಿಜ್ಞಾನದ ಕುರಿತು ತಜ್ಞರು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಿದ್ದಾರೆ’ ಎಂದರು.
ಬೆಳಗಾವಿ ರಾಣಿಚೆನ್ನಮ್ಮ ಮತ್ತು ಧಾರವಾಡ ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರೌಢಶಾಲೆ ಮತ್ತು ಕಾಲೇಜಿನ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರದ ಆಹ್ವಾನ ನೀಡಿದ್ದು, 100ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಳ್ಳುವ ನಿರೀಕ್ಷಯಿದೆ. ಶೂನ್ಯ ನೆರಳಿನ ದಿನ ವಿಶೇಷತೆ, ಅದಕ್ಕೆ ಕಾರಣವೇನು, ಹಿಂದೂ ಕ್ಯಾಲೆಂಡರ್ ಸಿದ್ಧಪಡಿಸುವ ಬಗೆ, ರಾತ್ರಿ ವೇಳೆ ಆಕಾಶ ವೀಕ್ಷಣೆ, ಅಲ್ಲಿಯ ವಿಸ್ಮಯ ಹೀಗೆ ಅನೇಕ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಉಚಿತ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಕಾರ್ಯಾಗಾರದ ಕಾರ್ಯದರ್ಶಿ ಜಯಶ್ರೀ ಬಿರಾದಾರ, ಈ ಭಾಗದಲ್ಲಿ ಆಗಸ್ಟ್‌ನಲ್ಲಿ ಶೂನ್ಯ ನೆರಳು ಗೋಚರಿಸಲಿದ್ದು, ಅದಕ್ಕಾಗಿ ಸಾರ್ವಜನಿಕರನ್ನು ಹಾಗೂ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದರು.
ಕಾರ್ಯಕ್ರಮದ ಸಂಚಾಲಕ ಡಾ. ಸಿ.ಎಸ್. ಹಿರೇಮಠ, ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮದ ಮುಖ್ಯಸ್ಥ ಎಂ.ಎಂ. ಪಾಟೀಲ ಇದ್ದರು.