ಹುಬ್ಬಳ್ಳಿ: ‘ಪ್ರಪಂಚದಲ್ಲಿ ಯಾರೂ ದಡ್ಡರಲ್ಲ. ಎಲ್ಲರಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಅನೇಕ ಸಾಧಕರು ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ. ಕಠಿಣ ಪರಿಶ್ರಮವಿದ್ದಾಗ ಮಾತ್ರ ಉತ್ತಮ ಫಲಿತಾಂಶ ಸಿಗುತ್ತದೆ. ಪ್ರಾರಂಭಿಕ ಹಂತದಲ್ಲಾಗುವ ಭಾಷಾ ಮಾಧ್ಯಮ ಹಾಗೂ ಇತರ ಸಮಸ್ಯೆಗಳಿಗೆ ಎದೆಗುಂದಬಾರದು. ತಾಂತ್ರಿಕ ವಿದ್ಯಾಭ್ಯಾಸದ ಜೊತೆಗೆ ಇತರ ಕೌಶಲ್ಯಗಳನ್ನು ಕಲಿತುಕೊಳ್ಳಬೇಕು’ ಎಂದು ಪ್ರಾಚಾರ್ಯ ಎಂ.ಎಸ್. ಮುಲ್ಲಾ ಹೇಳಿದರು.
ನಗರದ ಟಿಪ್ಪು ಷಹೀದ ಪಾಲಿಟೆಕ್ನಿಕ್‍ನಲ್ಲಿ 2022-23ನೇ ಸಾಲಿನ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಮೌಲ್ಯಯುತ ಹಾಗೂ ಕೌಶಲ್ಯಯುತ ಡಿಪ್ಲೊಮಾ ಎಂಜಿನಿಯರ್‌ಗಳನ್ನು ರೂಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.
ಸಿವಿಲ್ ವಿಭಾಗದ ಮುಖ್ಯಸ್ಥ ರವೀಂದ್ರ ಸಿಂಗ್ ಅತ್ತೇರ, ಆಟೋಮೊಬೈಲ್ ವಿಭಾಗದ ಮುಖ್ಯಸ್ಥರಾದ ಚಂದ್ರಶೇಖರ ತುಪ್ಪದವರ, ಮುಖ್ಯಸ್ಥ ಮಸೂದ ಅಹ್ಮದ ಜುನೇದಿ, ಎಂ.ಎಸ್. ಸೋಮನಕಟ್ಟಿ, ಬಾಳೇಶ ಎಸ್. ಹೆಗ್ಗಣ್ಣವರ, ಎ.ಎ. ಕಿತ್ತೂರ, ಎ.ಎಸ್.ಎ. ಮುಲ್ಲಾ, ಎಂ.ಎಚ್. ಧಾರವಾಡ ಇದ್ದರು. ಕಿರಣಕುಮಾರ ಮಂಟೂರ ನಿರೂಪಿಸಿದರು, ಎಂ.ಎ. ಬಾಗಲಕೋಟ ಸ್ವಾಗತಿಸಿದರು. ಬಾಳೇಶ ಹೆಗ್ಗಣ್ಣವರ ವಂದನಾರ್ಪಣೆ ಮಾಡಿದರು.