ಬೆಂಗಳೂರು;
ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಚಿತ್ರೀಕರಣ ಮಾಡುವಂತಿಲ್ಲ. ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ ಅಥವಾ ವಿಡಿಯೋ ಮಾಡದಂತೆ ಸರ್ಕಾರ ನಿರ್ಬಂಧ ವಿಧಿಸಿ ಮಧ್ಯಾಹ್ನ ಆದೇಶ ಹೊರಡಿಸಿತ್ತು. ಅದೇ ದಿನ ತಡರಾತ್ರಿ ವಾಪಾಸ್ ಪಡೆಯಲಾಗಿದೆ.
ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ. ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರು ಆಗಮಿಸುತ್ತಾರೆ. ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಬಂದು ಕಚೇರಿಯ ಫೋಟೋ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಹಾಗೂ ಇಂತಹ ಫೋಟೋ,ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಇಲಾಖೆ, ಸರ್ಕಾರದ ಘನತೆಗೆ ಕುಂದುಂಟಾಗುತ್ತದೆ.
ಹಾಗೆಯೇ ಅದರಲ್ಲೂ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿದ್ದು, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ಮಾಡದಂತೆ ಸರ್ಕಾರಕ್ಕೆ ರಾಜ್ಯ ನೌಕರರ ಸಂಘದ ರಾಜ್ಯಾಧ್ಯಕ್ಷರ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಆದೇಶ ಹೊರಡಿಸಿತ್ತು. ಆದೇಶ ಹೊರಬೀಳುತಿದ್ದಂತೆ ವ್ಯಾಪಕವಾಗಿ ಟೀಕೆ ಟಿಪ್ಪಣಿಗಳು ಬಂದ ಹಿನ್ನೆಲೆಯಲ್ಲಿ ತಡರಾತ್ರಿ ಆದೇಶವನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದಿದೆ.
