ಸನ್ಮಾರ್ಗ ತೋರಿಸುವವರೇ ಗುರು’: ನಾರಾಯಣಯಾಜಿ
ಸನಾತನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಗುರುಪೂರ್ಣಿಮಾ
ಹುಬ್ಬಳ್ಳಿ: ‘ಬದುಕಿನಲ್ಲಿ ಸನ್ಮಾರ್ಗ ತೋರಿಸುವವನೇ ಗುರು. ಹೀಗಾಗಿ, ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ’ ಎಂದು ವಕೀಲ ನಾರಾಯಣಯಾಜಿ ಹೇಳಿದರು.
ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸನಾತನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ರಾಷ್ಟ್ರ, ಧರ್ಮ ಹಾಗೂ ಸಮಾಜ ವಿಷಯದ ಕುರಿತು ಉಪನ್ಯಾಸ ನೀಡಿದರು.
‘ಗುರು ಮತ್ತು ಶಿಷ್ಯ ಎನ್ನುವ ಶ್ರೇಷ್ಠ ಪರಂಪರೆ ಇರುವುದು ಭಾರತದಲ್ಲಿ ಮಾತ್ರ. ಆತ್ಮ ಮತ್ತು ಚೈತನ್ಯವನ್ನು ಮೊದಲು ಗುರುತಿಸಿದ್ದೂ ಸಹ ಭಾರತದಲ್ಲೇ. ಗುರು ಎನ್ನುವುದು ಸಹ ಒಂದು ತತ್ವ’ ಎಂದು ಅಭಿಪ್ರಾಯಪಟ್ಟರು.
‘ಜ್ಞಾನ ಪಡೆಯಲು ಹಲವು ಮಾರ್ಗಗಳಿವೆ. ಗುರುವಿನ ನಡವಳಿಕೆಯನ್ನು ನೋಡಿ ಕಲಿಯುವುದು ಸಹ ಶಿಕ್ಷಣ. ತಪ್ಪುಗಳನ್ನು ಮಾಡದೆ ಒಳ್ಳೆಯ ಮಾರ್ಗದಲ್ಲಿ ಸಾಗಬೇಕು. ಪ್ರತಿ ಭಾಷೆಯ ಹಿಂದೆಯೂ ಒಂದೊಂದು ಸಂಸ್ಕೃತಿ ಇದೆ. ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದರು.
ಸನಾತನ ಸಂಸ್ಥೆಯ ಪ್ರಚಾರ ಸೇವಕ ಅಶೋಕ ಭೋಜ ಮಾತನಾಡಿದರು. ಕಾವೇರಿ ರಾಯ್ಕರ, ಗೀತಾಂಜಲಿ ಕಡಿವಾಳ, ಜಯಶ್ರೀ ಹೆಬಸೂರ ಇದ್ದರು.