Breaking News

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಆಟೋಗಳ ಬಾಡಿಗೆ ಕನಿಷ್ಠ ದರ 30 ರೂ.ಗೆ ಏರಿಕೆ

Spread the love

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಹದಾರಿ ಹೊಂದಿರುವ ಆಟೋರಿಕ್ಷಾಗಳು ತನ್ನ ಪ್ರಯಾಣಿಕರಿಗೆ ವಿಧಿಸುವ ಕನಿಷ್ಠ ದರದಲ್ಲಿ ಏರಿಕೆ ಮಾಡಲು ನಿರ್ಧರಿಸಲಾಗಿದೆ. ಪ್ರಯಾಣದ ಮೊದಲ 1.6 ಕಿಲೋ ಮೀಟರ್‍ವರೆಗೆ ಈಗ ಇದ್ದ ಆಟೋಗಳ ಕನಿಷ್ಠ ಬಾಡಿಗೆ ದರವನ್ನು 28 ರೂ.ಗಳಿಂದ 30 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಪರಿಷ್ಕøತ ದರಗಳು ಬರುವ ಅಕ್ಟೋಬರ್ 1 ರಿಂದ ಜಾರಿಗೊಳ್ಳಲಿವೆ. ಎಲ್ಲಾ ಆಟೋರಿಕ್ಷಾಗಳು ಅಕ್ಟೋಬರ್ 15 ರೊಳಗೆ ಕಡ್ಡಾಯವಾಗಿ ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2018 ರ ಅಕ್ಟೋಬರ್ ತಿಂಗಳಲ್ಲಿ ಆಟೋಗಳ ಬಾಡಿಗೆ ದರ ನಿಗದಿಪಡಿಸಲಾಗಿತ್ತು. ಪೆಟ್ರೋಲ್ ಮತ್ತು ಎಲ್‍ಪಿಜಿ ದರಗಳಲ್ಲಿ ಏರಿಕೆಯಾಗಿರುವುದರಿಂದ ಕನಿಷ್ಠ ಬಾಡಿಗೆ ದರವನ್ನು ಪರಿಷ್ಕರಿಸಲು ಕೋರಿ ಆಟೋರಿಕ್ಷಾ ಚಾಲಕರ ಸಂಘಗಳು ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಸಭೆಯಲ್ಲಿ ವಿಸ್ತøತವಾಗಿ ಚರ್ಚಿಸಿ ದರ ಪರಿಷ್ಕಣೆಯ ನಿರ್ಧಾರ ಪ್ರಕಟಿಸಿದರು.
ಅವಳಿ ನಗರದಲ್ಲಿ ಬಾಡಿಗೆಯ ರಹದಾರಿ ಹೊಂದಿರುವ ಆಟೋರಿಕ್ಷಾಗಳು ಪ್ರಯಾಣದ ಪ್ರಾರಂಭಿಕ 1.6 ಕಿಲೋ ಮೀಟರ್‍ವರೆಗೆ 30 ರೂ. ಕನಿಷ್ಠ ಬಾಡಿಗೆ ದರ, ನಂತರದ ಪ್ರತಿ ಒಂದು ಕಿಲೋ ಮೀಟರ್ ದೂರಕ್ಕೆ 15 ರೂ. ಹಾಗೂ ರಾತ್ರಿ 10 ರಿಂದ ಬೆಳಗಿನ 5 ಗಂಟೆಯವರೆಗೆ ಅರ್ಧಪಟ್ಟು ಹೆಚ್ಚುವರಿ ದರ ಪಡೆಯಬಹುದು. ಎಲ್ಲಾ ಆಟೋರಿಕ್ಷಾಗಳು ಅಕ್ಟೋಬರ್ 15 ರೊಳಗೆ ಕಡ್ಡಾಯವಾಗಿ ಡಿಜಿಟಲ್ ಫೇರ್ ಮೀಟರ್ ಅಳವಡಿಸಿಕೊಂಡು ಮೀಟರ್ ಸತ್ಯಾಪನೆ ಮಾಡಿಸಿಕೊಳ್ಳಬೇಕು.
ಕಾನೂನು ಮಾಪನ ಶಾಸ್ತ್ರ ಇಲಾಖೆಯು ಅವಳಿ ನಗರದಲ್ಲಿ ಡಿಜಿಟಲ್ ಫೇರ್ ಮೀಟರ್ ಅಳವಡಿಸುವ ಮತ್ತು ಪೂರೈಸುವ ಡೀಲರುಗಳ ಸಂಖ್ಯೆಯನ್ನು 5 ಕ್ಕೆ ಹೆಚ್ಚಿಸಿ ತ್ವರಿತ ಸೇವೆ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದ ಬಸ್, ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಪ್ರಿಪೇಡ್ ಆಟೋರಿಕ್ಷಾ ಸ್ಟ್ಯಾಂಡ್‍ಗಳನ್ನು ನಿರ್ಮಿಸಿ ಕೊಡಬೇಕು. ಅವಳಿ ನಗರದ ಎಲ್ಲ ವಲಯಗಳ ವ್ಯಾಪ್ತಿಗಳಲ್ಲಿ ಆಟೋರಿಕ್ಷಾ ಸ್ಟ್ಯಾಂಡ್‍ಗಳು, ಶೌಚಾಲಯಗಳನ್ನು ನಿರ್ಮಿಸಿ ಸ್ಥಳೀಯ ಆಟೋರಿಕ್ಷಾ ಚಾಲಕರ ಸಂಘದವರಿಗೆ ನಿರ್ವಹಣೆ ಜವಾಬ್ದಾರಿ ವಹಿಸಬೇಕೆಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಆಟೋಸ್ಟ್ಯಾಂಡ್‍ಗಳನ್ನು ನಿರ್ಮಿಸಿ ನಗರದ ಸೌಂದರ್ಯಿಕರಣ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಪಡಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಈಗಾಗಲೇ ನೋಂದಣಿಯಾಗಿರುವ ಭಾರತ್ ಸ್ಟೇಜ್-4 ಮಾಪನದ ವಾಹನಗಳಿಗೆ ಹಾಗೂ ಮಾಲೀಕತ್ವ ವರ್ಗಾವಣೆ ಸಂದರ್ಭದಲ್ಲಿ ರದ್ದಾಗಿರುವ ಹಳೆಯ ಆಟೋರಿಕ್ಷಾಗಳ ಭೌತಿಕ ಸಾಮಥ್ರ್ಯ (ಫಿಟ್‍ನೆಸ್) ಎಮಿಷನ್ ಮೊದಲಾದ ಮಾನದಂಡಗಳನ್ನು ಪರಿಶೀಲಿಸಿ ಒಂದು ಬಾರಿ ರಹದಾರಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಮಾತನಾಡಿ, ಬಿಎಸ್-4 ಹಾಗೂ ಮಾಲೀಕತ್ವ ವರ್ಗಾವಣೆಯಾಗಿರುವ ಆಟೋಗಳಿಗೆ ರಹದಾರಿ ನೀಡುವ ಸಂದರ್ಭದಲ್ಲಿ ಈ ಹಿಂದೆ ಪೊಲೀಸ್ ಅಥವಾ ಆರ್‍ಟಿಓ ವರದಿ ಆಧರಿಸಿ ರಹದಾರಿ ರದ್ದು ಪಡಿಸಿದ್ದರೆ ಅವುಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಲೋಪವಾಗದಂತೆ ಎಚ್ಚರ ವಹಿಸಬೇಕು ಎಂದರು.
ಹುಬ್ಬಳ್ಳಿ ಧಾರವಾಡ ಉಪ ಪೊಲೀಸ್ ಆಯುಕ್ತ ಗೋಪಾಲ ಬ್ಯಾಕೋಡ್ ಮಾತನಾಡಿ, ಡಿಜಿಟಲ್ ಫೇರ್ ಮೀಟರ್ ಅಳವಡಿಸುವ ಡೀಲರುಗಳು ಆಟೋರಿಕ್ಷಾಗಳ ಮಾಲೀಕರಿಂದ ಅಧಿಕ ಶುಲ್ಕ ವಸೂಲಿ ಮಾಡಬಾರದು. ನಿಗದಿತ ದರ ಮಾತ್ರ ವಿಧಿಸಭೇಕು. ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು ಡೀಲರುಗಳಿಗೆ ಈ ಕುರಿತು ಎಚ್ಚರಿಕೆ ನೀಡಬೇಕು ಎಂದರು.
ಆಟೋರಿಕ್ಷಾ ಚಾಲಕರ ಸಂಘದ ಎನ್.ಎನ್.ಇನಾಮದಾರ, ದೇವಾನಂದ ಜಗಾಪೂರ, ಬಿ.ಎ.ಮುಧೋಳ ಮತ್ತಿತರರು ಅಭೆಗೆ ಆಗಮಿಸಿ ಕಳೆದ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ಪೆಟ್ರೋಲ್ ಹಾಗೂ ಎಲ್‍ಪಿಜಿ ದರಗಳಲ್ಲಿ ಏರಿಕೆಯಾಗಿದೆ. ಕನಿಷ್ಠ ಬಾಡಿಗೆ ದರವನ್ನು ಪ್ರತಿ 2 ಕಿಲೋ ಮೀಟರ್‍ಗೆ 50 ರೂ.ಗಳಂತೆ ನಿಗದಿಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಹುಬ್ಬಳ್ಳಿ ಧಾರವಾಡ ಪಶ್ಚಿಮ ಪ್ರಾದೇಶಿಕ ಸಾರಿಗೆ ಅಧಿಕಾರಿ ಬಿ.ಶಂಕರಪ್ಪ, ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಮತ್ತಿತರರು ಇದ್ದರು.
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಒಳಚರಂಡಿ, ಕುಡಿಯುವ ನೀರು ಪೂರೈಕೆ ಮಾರ್ಗ ಸೇರಿದಂತೆ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಗಳನ್ನು ಸಂಬಂಧಿಸಿದ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿಕೊಂಡು ತ್ವರಿತವಾಗಿ ಪೂರ್ಣಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ರಸ್ತೆಗಳನ್ನು ಮುಕ್ತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಇಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ ನಗರದ ಹೊಸೂರು ಕ್ರಾಸ್‍ನಿಂದ ವಾಣಿವಿಲಾಸ ವೃತ್ತದವರೆಗಿನ ರಸ್ತೆಯಲ್ಲಿ ವಾಹನಗಳಿಗೆ ಎಡಗಡೆಗೆ ಮುಕ್ತವಾಗಿ (Free left turn) ತೆರಳಲು ಅನುಕೂಲವಾಗುವಂತೆ ಜಾಗೆಯ ಸಮೀಕ್ಷೆ ಮಾಡಿ ತೆರವುಗೊಳಿಸಬೇಕು. ಸದ್ಯ ಇರುವ ಬಸ್ ನಿಲುಗಡೆ ಸ್ಥಳವನ್ನು ಸ್ಥಳಾಂತರಿಸಬೇಕು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಈ ಕಾರ್ಯವನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು.
ವಾಣಿವಿಲಾಸ ವೃತ್ತದಿಂದ ಶಕುಂತಲಾ ಸ್ಮಾರಕ ಆಸ್ಪತ್ರೆ ಕಡೆಗೆ ತೆರಳುವ ಮಾರ್ಗದಲ್ಲಿರುವ 67 ಮನೆಗಳ ಜನರಿಗೆ ಪುನರ್ವಸತಿ ಕಲ್ಪಿಸಲು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಈಗಾಗಲೇ ನಿರ್ಮಿಸಿರುವ 40 ಮನೆಗಳನ್ನು ಸಮೀಕ್ಷೆ ಮಾಡಿ ಅರ್ಹರಿಗೆ ಹಂಚಿಕೆ ಮಾಡಿ ಸ್ಥಳಾಂತರಿಸಬೇಕು. ಉಳಿದ ಮನೆಗಳನ್ನು ಕೂಡಾ ಬೇಗ ಪೂರ್ಣಗೊಳಿಸಿ ಎಲ್ಲ ನಿವಾಸಿಗಳನ್ನು ಸ್ಥಳಾಂತರ ಮಾಡಿ ರಸ್ತೆಗೆ ಜಾಗ ಕಲ್ಪಿಸಬೇಕು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯ ನಿರ್ವಹಿಸಬೇಕು. ಇಂಡಿ ಪಂಪ್‍ನಿಂದ ಸಿದ್ಧಾರೂಢ ಪ್ರೌಢಶಾಲೆಯವರೆಗೆ ಒಳಚರಂಡಿ ನಿರ್ಮಾಣ ಕಾಮಗಾರಿ, ರಸ್ತೆ ದುರಸ್ತಿ ಕಾರ್ಯವನ್ನು ಸೆಪ್ಟಂಬರ್ 15 ರೊಳಗೆ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗೆ ಎರಡೂ ಬದಿಗಳಿಂದ ಬಂದು ಕೂಡುವ ರಸ್ತೆಗಳಲ್ಲಿ ವೇಗದ ಅಡೆತಡೆಗಳನ್ನು ವೈಜ್ಞಾನಿಕವಾಗಿ ಹಾಕಬೇಕು. ಹೆದ್ದಾರಿಗಳ ಅಂಚಿನಲ್ಲಿ ರಿಫ್ಲೆಕ್ಟರ್ ಸ್ಟಡ್ಸ್ ಸೂಚನಾ ಫಲಕಗಳು, ರಂಬಲ್ ಸ್ಟ್ರಿಪ್ಸ್ ಅಳವಡಿಸಿ ರಸ್ತೆ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಹುಬ್ಬಳ್ಳಿ ಧಾರವಾಡ ಉಪಪೊಲೀಸ್ ಆಯುಕ್ತ ಗೋಪಾಲ ಬ್ಯಾಕೋಡ್ ಮಾತನಾಡಿ, ಹುಬ್ಬಳ್ಳಿಯ ಸರ್ವೋದಯ ವೃತ್ತದಿಂದ ರಮೇಶಭವನದವರೆಗೆ ರಸ್ತೆ ಕಾಮಗಾರಿ ಮುಗಿದಿದೆ. ಉಳಿದಿರುವ ಸಣ್ಣ ಪುಟ್ಟ ಕಾರ್ಯಗಳನ್ನು ತ್ವರಿತವಾಗಿ ಕೈಗೊಂಡು ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ.ಶಂಕರಪ್ಪ, ಕೆ.ದಾಮೋದರ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರರಾದ ತಿಮ್ಮಪ್ಪ ವಿಜಯಕುಮಾರ, ಹೆಸ್ಕಾಂ ಅಧೀಕ್ಷಕ ಇಂಜಿನೀಯರ್ ಜಗದೀಶ್, ಲೋಕೋಪಯೋಗಿ ಕಾರ್ಯನಿರ್ವಾಹಕ ಇಂಜಿನೀಯರ್ ಬಿ.ಎಸ್.ಮುರಳೀಧರ ಮತ್ತಿತರರು ಇದ್ದರು.


Spread the love

About Karnataka Junction

[ajax_load_more]

Check Also

ಬಸ್ ದರ ಏರಿಕೆ ಖಂಡಿಸಿ ಎಬಿವಿಪಿ ಪ್ರತಿಭಟನೆ

Spread the loveಹುಬ್ಬಳ್ಳಿ: ಸಾರಿಗೆ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಳ ಮಾಡಿದ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ …

Leave a Reply

error: Content is protected !!