ಹುಬ್ಬಳ್ಳಿ: ಯಾವುದೇ
ಅಪರಾಧಗಳ ಪ್ರಕರಣಗಳು ಕಡಿಮೆಯಾಗಲು ವಿವಿಧ ಠಾಣೆಗಳ ಸಿಬ್ಬಂದಿ ಜೊತೆ ವಿಚಾರ ವಿನಿಮಯ ಹಾಗೂ ಮಾಹಿತಿ ಹಂಚಿಕೊಳ್ಳುವುದರಿಂದ ಬಹುತೇಕ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಬಹುದು ಎಂದು ಪೊಲೀಸ್ ಕಮಿಷನರ್ ಲಾಭೂರಾಮ್ ಹೇಳಿದರು.
ವಿದ್ಯಾನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಆಡಿಟೋರಿಯಂನಲ್ಲಿ ಕರ್ನಾಟಕ ಸೂಪರ್ ಕಾಪ್ಸ್ ವಾಟ್ಸ್‌ಆ್ಯಪ್ ಗ್ರೂಪ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಅಪರಾಧ ವಿಭಾಗದ ಕಾರ್ಯಾಗಾರ ಮತ್ತು ಪ್ರಥಮ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕೆಲಸ. ಅಪರಾಧ ಪ್ರಕರಣ ನಡೆದ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರೆ, ಅರ್ಧದಷ್ಟು ತನಿಖೆ ಪೂರ್ಣಗೊಳ್ಳುತ್ತದೆ. ಅಪರಾಧ ಚಟುವಟಿಕೆಗಳಿಗೆ ಹೇಗೆ ನಿಯಂತ್ರಣ ಹೇರಬೇಕು, ಹೊಸ ಬಗೆಯ ಅಪರಾಧಗಳನ್ನು ಹೇಗೆ ಪತ್ತೆ ಮಾಡಬೇಕು ಎನ್ನುವ ಕುರಿತು ಬೇರೆ ಜಿಲ್ಲೆಗಳಿಂದ ಬಂದ ಅಪರಾಧ ವಿಭಾಗದ ನುರಿತ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಬೇಕು. ಇದರಿಂದ ಅಕ್ಕಪಕ್ಕದ ಜಿಲ್ಲೆಗಳ ಅಪರಾಧ ಕೃತ್ಯಗಳನ್ನು ಸಹ ಪತ್ತೆ ಮಾಡಲು ಸಹಾಯವಾಗುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ ಹಾಗೂ ಅಪರಾಧ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಇದ್ದರು.
