ಹುಬ್ಬಳ್ಳಿ:- ಕರಾವಳಿ ಫಿಷ್ ಲ್ಯಾಂಡ್ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ಇಲ್ಲಿನ 5 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 52 ಸಾವಿರ ದಂಡ ವಿಧಿಸಿದೆ.
ಅಶ್ವಾಕ ಸುತಾರ , ಮಹ್ಮದ್ ಆರೀಫ್ ಐನಾಪುರಿ ಶಿಕ್ಷೆಗೆ ಒಳಗಾದವರು, ಗಿರಿಯಾಲ ರೋಡ್ ಪಕ್ಕಕ್ಕೆ ಇರುವ ಕಾಮರೆಡ್ಡಿ ಕಾಂಪ್ಲೆಕ್ಸ್‌ನಲ್ಲಿದ್ದ ಕರಾವಳಿ ಫಿಷ್ ಲ್ಯಾಂಡ್ ಹೋಟೆಲ್ ಮಾಲೀಕ ಉದಯ ಮರಕಲ್ ಗಾಯಗೊಂಡಿದ್ದರು. ಘಟನೆ ಹಿನ್ನೆಲೆ : 2018 ಫೆ . 31 ರಂದು ಹೋಟೆಲ್‌ನಲ್ಲಿ ವ್ಯಾಪಾರ ಮಾಡುತ್ತಿದ್ದಾಗ ರಾತ್ರಿ 10 ರ ಸುಮಾರಿಗೆ ಬಂದ ಆರೋಪಿತರು ಸರಾಯಿ ಬಾಟಲಿಗೆ ನೀರು ಮಿಕ್ ಮಾಡಲು ಹೋಟೆಲ್‌ನಲ್ಲಿದ್ದ ನೀರಿನ ಜಗ್ಗು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಉದಯ ಅವರು ಜಗ್ಗನ್ನು ಹೊರಗಡೆ ತೆಗೆದುಕೊಂಡು ಹೋದರೆ ಊಟ ಮಾಡುವವರಿಗೆ ತೊಂದರೆಯಾಗುತ್ತದೆ ಎಂದು ಹೇಳಿದಕ್ಕೆ ಆರೋಪಿತರು ಅವಾಚ್ಯವಾಗಿ ಬೈದಿದ್ದಾರೆ . ನಂತರ ಇದನ್ನು ಪ್ರಶ್ನಿಸಿದಾಗ ಇಬ್ಬರು ಸೇರಿ ಬಟನ್ ಚಾಕುವಿನಿಂದ ಬೆನ್ನು ಮತ್ತು ಬಲಗಡೆ ಪಕ್ಕಡಿಗೆ ಇರಿದು ಕೊಲೆ ಮಾಡಲು ಯತ್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 5 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್ . ಗಂಗಾಧರ ಶಿಕ್ಷೆ ವಿಧಿಸಿದ್ದಾರೆ . ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಎಂ. ಅಂಚಟಗೇರಿ ವಾದ ಮಂಡಿಸಿದ್ದರು.