ವೈದ್ಯರ ದಿನದಂದೇ ವೈದ್ಯರ ಬೀದಿಗಿಳಿದು ಪ್ರತಿಭಟನೆ
Karnataka Junction
September 23, 2022
ಜಿಲ್ಲೆ
126 Views
- ಹುಬ್ಬಳ್ಳಿ: ಮೇಲಿಂದ ಮೇಲೆ ವೈದ್ಯರ ಮೇಲೆ ನಡೆಯುತ್ತಿರುವ ನಿಂದನೆ ಮತ್ತು ಹಲ್ಲೆಯಂಥ ಘಟನೆಗಳನ್ನು ಖಂಡಿಸಿ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ವೈದ್ಯರು ಮೌನ ಮೆರವಣಿಗೆ ಮಾಡುವ ಮೂಲಕ ವೈದ್ಯರ ದಿನ ಆಚರಿಸಿದರು.ಕಿಮ್ಸ್ ವೈದ್ಯರ ಸಂಘ ಮತ್ತು ಜೂನಿಯರ್ ವೈದ್ಯರ ಸಂಘದ ಸಹಯೋಗದಲ್ಲಿ ನಡೆದ ಮೆರವಣಿಗೆ ಕಾಲೇಜಿನ ಮುಖ್ಯ ಕಟ್ಟಡದಿಂದ ಆರಂಭವಾಗಿ ಕಿಮ್ಸ್ ಮುಖ್ಯದ್ವಾರದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ತನಕ ಸಾಗಿತು. ಅಲ್ಲಿ ಗಾಂಧಿ ಅವರ ಪ್ರತಿಮೆಗೆ ವೈದ್ಯರು ಮಾಲಾರ್ಪಣೆ ಮಾಡಿದರು.
ವೈದ್ಯರು ಮೆರವಣಿಗೆಯಲ್ಲಿ ’ಕಾಪಾಡೊ ಕೈ ಮೇಲೆ ಕೈ ಮಾಡಬೇಡಿ, ನಮ್ಮ ಹಕ್ಕುಗಳನ್ನು ಕೇಳುವುದು ಕಾನೂನುಬಾಹಿರವಲ್ಲ, ವೈದ್ಯರ ಮೇಲೆ ಹಲ್ಲೆ ನಿಲ್ಲಿಸಿ, ನಮಗೆ ನ್ಯಾಯ ಕೊಡಿ, ಪ್ರಾಣ ಉಳಿಸುವ ಜೀವಗಳ ಮೇಲೆ ಹಲ್ಲೆ ಮಾಡಬೇಡಿ’ ಎನ್ನುವ ಸಂದೇಶಗಳು ಇರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಕಿಮ್ಸ್ ವೈದ್ಯರ ಸಂಘದ ಅಧ್ಯಕ್ಷ ಡಾ. ರಾಜಶೇಖರ ದುಂಡಾರಡ್ಡಿ ಮಾತನಾಡಿ, ವೈದ್ಯರಷ್ಟೇ ಅಲ್ಲದೆ, ಎಲ್ಲ ವೈದ್ಯಕೀಯ ಸಿಬ್ಬಂದಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಜನರ ಜೀವ ಉಳಿಸಲು ನಾವು ಹೋರಾಟ ಮಾಡಿದರೂ, ನಮಗೆ ರಕ್ಷಣೆ ಇಲ್ಲದಂತಾಗಿದೆ’ ಎಂದರು.
- ಸಂಘದ ಕಾರ್ಯದರ್ಶಿ ಡಾ. ಸುರೇಶ ಹುಚ್ಚಣ್ಣನವರ, ಖಜಾಂಚಿ ಡಾ. ಗುರುರಾಜ ಮುರಗೋಡ, ವೈದ್ಯರಾದ ಕೆ.ಎಫ್ ಕಮ್ಮಾರ, ಗುರುಶಾಂತಪ್ಪ ಯಲಗಚ್ಚಿನ, ಈಶ್ವರ ಹೊಸಮನಿ, ರಾಜಶೇಖರ ದ್ಯಾಬೇರಿ, ರವೀಂದ್ರ ಗದಗ, ಎಸ್.ವೈ. ಮುಲ್ಕಿ ಪಾಟೀಲ, ಶಿಲ್ಪಾ ಹುಚ್ಚಣ್ಣನವರ, ವೀಣಾ ಮರಡಿ, ಸ್ಮಿತಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Posts Views: 35