ಹುಬ್ಬಳ್ಳಿ:
ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ವಿಚಾರಣೆಗೆ ಒಳಪಡಿಸಲು ಮುಖ್ಯಮಂತ್ರಿ ಗೆ ಇಡಿ ನೋಟಿಸ್ ( ಜಾರಿ ನಿರ್ದೇಶನಾಲಯ) ಜಾರಿಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗಿಯಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಡೆ ಹಿಡಿಯುವ ಪ್ರಯತ್ನ ವಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್. ಕೆ. ಪಾಟೀಲ ಬಿಜೆಪಿ ಯನ್ನು ದೂಷಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಚುನಾವಣಾ ಆಯೋಗ ಆಧಿಸೂಚನೆ ಹೊರಡಿಸಿದ ಬಳಿಕ ಇಡಿ ಸಕ್ರಿಯವಾಗಿದೆ. ವಕ್ಫ್ ವಿಚಾರದಲ್ಲಿ ಇದೀಗ ಜೆಪಿಸಿ ( ಜಂಟಿ ಸಂಸದೀಯ ಮಂಡಳಿ) ಯನ್ನು ಕರೆ ತಂದಿದ್ದಾರೆ. ಇದನ್ನೆಲ್ಲ ನೋಡಿದರೆ ಬಿಜೆಪಿಯು ರಾಜಕಾರಣ ಮಾಡುತ್ತಿರುವುದಯ ಸ್ಪಷ್ಟವಾಗುತ್ತಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಲಘುವಾಗಿ ಮಾತನಾಡುವವರ ಬಗ್ಗೆ ಚುನಾವಣೆ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು. ಬಿಜೆಪಿಯ ಸಿ.ಟಿ. ರವಿ, ಸಂಸದರೊಬ್ಬರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಆದರೆ, ಜವಾಬ್ದಾರಿ ಸ್ಥಾನದಲ್ಲಿರುವ ಚುನಾವಣೆ ಆಯೋಗ ನಿಧಾನವಾಗಿ ಹೆಜ್ಜೆ ಇಡುವುದು ಪ್ರಜಾಪ್ರಭುತ್ವ ದಲ್ಲಿ ವಿಶ್ವಾಸವಿಟ್ಟಿರುವ ಎಲ್ಲರಿಗೂ ನೋವು ತಂದಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿ ಬಂದಿದ್ದರೂ ಬಿಜೆಪಿಯವರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎಚ್. ಕೆ. ಪಾಟೀಲ, ಸಿದ್ದರಾಮಯ್ಯ ಅವರು ಲೋಕಾಯುಕ್ತ ಸಂಸ್ಥೆಯನ್ನು ಗೌರವಿಸಿ ವಿಚಾರಣೆಗೆ ಹಾಜರಾಗಿ ಬಂದಿದ್ದಾರೆ. ವಿಚಾರಣೆಗೆ ಸ್ಪಂದಿಸಿದ್ದಾರೆ. ದೇಶ ಅತಿ ದೊಡ್ಡ ಹಗರಣ (ಗಣಿ) ವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಿದ ಲೋಕಾಯುಕ್ತ ಸಂಸ್ಥೆ ಬಗ್ಗೆ ಯಾರೂ ಲಘುವಾಗಿ ಮಾತನಾಡಬಾರದು. ಸಂಶಯ ವ್ಯಕಪಡಿಸುವುದು ದುರ್ದೈವದ ಸಂಗತಿ ಎಂದರು.