ಹುಬ್ಬಳ್ಳಿ: ಸಣ್ಣ ಕೈಗಾರಿಕೆಗಳಲ್ಲಿ ತುಂಬಾ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು. ಸಣ್ಣ ಕೈಗಾರಿಕೆಗಳಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪೂರ ಹೇಳಿದರು.
ಇಂದು ಗೋಕುಲ ರಸ್ತೆಯ ಕೆ.ಎಸ್.ಎಫ್.ಸಿ ಸಭಾಂಗಣದಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿAದ ಆಯೋಜಿಸಿದ್ದ ಕೆ.ಎಸ್.ಎಸ್.ಐ.ಡಿ.ಸಿ. ಹುಬ್ಬಳ್ಳಿ ವಿಭಾಗದ ಮಳಿಗೆ, ನಿವೇಶನಗಳ ಕ್ರಯ ಪತ್ರ ವಿತರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಬಜೆಟ್‌ನಲ್ಲಿ ಏಳು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದ್ದು, ಅದರಲ್ಲಿ ಐದು ಕ್ಷೇತ್ರಗಳಲ್ಲಿ ಹೊಸ ಲೇಔಟ್ ಮಾಡಲು ಟೆಂಡರ್ ಕರೆಯಲಾಗಿದೆ. ಮುಂದಿನ ವರ್ಷದಿಂದ 10 ಹೊಸ ಲೇಔಟ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಉದ್ದಿಮೆದಾರರಿಗೆ ಬೇಕಾಗುವ ಭೂಮಿ, ನೀರು, ವಿದ್ಯುತ್, ಸಬ್ಸಿಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿ ಪ್ರಾರಂಭವಾಗುತ್ತಿವೆ. ಅದರ ಹೊರತಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಸಹ ಕೈಗಾರಿಕೆಗಳು ಹೆಚ್ಚಾಗಿ ಆರಂಭವಾಗಬೇಕಿವೆ. ಕೈಗಾರಿಕೆ ಸ್ಥಾಪನೆಗೆ ಹೆಚ್ಚಿನ ರಿಯಾಯಿತಿಯನ್ನು ಒದಗಿಸಿ ಬೆಳಗಾವಿ, ವಿಜಯಪುರ, ಬಾಗಲಕೋಟ, ಬಳ್ಳಾರಿ, ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿ ಸಹ ತೆರೆಯಲು ಮುತುವರ್ಜಿ ವಹಿಸಲಾಗುವುದು. ಉದ್ದಿಮೆದಾರರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬರಬೇಕು. ರಾಯಚೂರಿನಲ್ಲಿ 70 ಔಷಧಿ ಫಾರ್ಮಾ ಕೈಗಾರಿಕೆಗಳು ಆರಂಭಗೊAಡಿವೆ. 2ನೇ ಹಂತದಲ್ಲಿ 1700 ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಬೇರೆ ರಾಜ್ಯದ ಜನರ ಹೊರತಾಗಿ ಈ ಭಾಗದ ಜನರು ಹೆಚ್ಚಿನ ಉದ್ಯೋಗಾವಕಾಶ ಪಡೆದುಕೊಳ್ಳಬೇಕು. ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿದರೂ ಪ್ರಯೋಜನವಾಗುತ್ತಿಲ್ಲ. 10 ವರ್ಷದಲ್ಲಿ ಸಿಗುವ ಸಿ.ಎಲ್.ಡಿ ಯನ್ನು ಎರಡು ವರ್ಷದಲ್ಲಿ ಸಿಗುವಂತೆ ಮಾಡಲಾಗುವುದು. ಈಗಾಗಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿನ ಸಣ್ಣ ಕೈಗಾರಿಕೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಣ್ಣ ಕೈಗಾರಿಕೆಗಳಲ್ಲಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಬೇಕು. ಅವುಗಳನ್ನು ಪ್ರಾಮಾಣಿಕ ಪ್ರಯತ್ನದಿಂದ ಬಗೆಹರಿಸಲು ಮುಂದಾಗುತ್ತೇನೆ. ಕಾನೂನಿನ ಚೌಕಟ್ಟಿನಲ್ಲಿ ಸಮಸ್ಯೆಗಳ ಇತ್ಯರ್ಥಕ್ಕೆ ಗಮನಹರಿಸಲಾಗುತ್ತದೆ. ಸಣ್ಣ ಕೈಗಾರಿಕೆಗಳಿಂದ ಜಿಡಿಪಿಯಲ್ಲಿ ಬಹುಪಾಲು, ಬೃಹತ್ ಉದ್ಯೋಗ ಸೃಷ್ಟಿ ಆಗುವುದರಿಂದ ಹೆಚ್ಚಿನ ಸಹಾಯ ಸಹಕಾರ ಒದಗಿಸಲು ಸಿದ್ಧವಾಗಿರುವೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಶಾಸಕರಾದ ಟಿ.ರಘುಮೂರ್ತಿ ಮಾತನಾಡಿ, ಈ ಭಾಗದ 4 ಜಿಲ್ಲೆಗಳಾದ ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ 64 ಜನರಿಗೆ ಇಂದು ನಿವೇಶನ, ಮಳಿಗೆ ಕ್ರಯ ಪತ್ರಗಳನ್ನು ವಿತರಿಸಲಾಗುತ್ತಿದೆ. ಕೈಗಾರಿಕೆಗಳ ಸಮಸ್ಯೆಗಳಿಗೆ ಕಾನೂನು ಚೌಕಟ್ಟು ಹಾಗೂ ಅದರ ಹೊರತಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಇತ್ಯರ್ಥಕ್ಕೆ ಕ್ರಮ ವಹಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಉದ್ದಿಮೆದಾರರಿಗೆ ಕ್ರಯ ಪತ್ರಗಳನ್ನು ವಿತರಿಸಲಾಯಿತು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಶಶಿಧರ ಶೆಟ್ಟಿ, ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ಗಿರೀಶ ನಲವಡಿ, ಸಿ. ನಾಗರಾಜ, ಜೆ.ಸಿ. ಮಠದ, ಅಶೋಕ ಕುನ್ನೂರು, ಅಶೋಕ ಕಲಬುರ್ಗಿ, ಅನಿಲಕುಮಾರ ಜೈನ್, ಶಂಕರ ಹಿರೇಮಠ, ಭರತ ಕುಲಕರ್ಣಿ, ರಮೇಶ ಯಾದವಾಡ, ಶ್ರೀಕಾಂತ ಕಬಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.