ಹುಬ್ಬಳ್ಳಿ: ಹಳೇಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಪ್ರೇರಣೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಆರೋಪಿಸಿದ್ದು, ಅವರಿಂದ ವಾರದೊಳಗೆ ದಾಖಲೆ ಪಡೆಯಬೇಕು. ಇಲ್ಲದಿದ್ದರೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ವೇದವ್ಯಾಸ ಕೌಲಗಿ ಅವರು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.
ನಳಿನ್ ಕುಮಾರ್ ಅವರು ಆಧಾರರಹಿತವಾಗಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದು, ಅವರ ಹೇಳಿಕೆಯಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಲಿದೆ. ಹೀಗಾಗಿ, ಅವರಿಗೆ ನೋಟಿಸ್ ಜಾರಿ ಮಾಡಬೇಕು. ಒಂದೊಮ್ಮೆ ಸಮರ್ಪಕ ಮಾಹಿತಿ ನೀಡದಿದ್ದರೆ, ಎಫ್‌ಐಆರ್ ದಾಖಲಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
