ಹುಬ್ಬಳ್ಳಿ: ಮೂರೂ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ಪ್ರಾಬಲ್ಯ ಮೆರೆದ ದಿ ವ್ಯಾನ್‌ಕುಷರ್ ತಂಡ, ಜಿಮ್ಖಾನಾ ಪ್ರೀಮಿಯರ್ ಲೀಗ್ (ಜಿಪಿಎಲ್) ಬ್ಯಾಡ್ಮಿಂಟನ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಚಾಂಪಿಯನ್ ಆಯಿತು.
ಫೈನಲ್ ಪಂದ್ಯದಲ್ಲಿ ವ್ಯಾನ್‌ಕುಷರ್ 3–0ರಲ್ಲಿ ಎದುರಾಳಿ 8 ಪಿ.ಎಂ. ಪಾಲ್ಕನ್ಸ್ ತಂಡವನ್ನು ಮಣಿಸಿತು. ಚಾಂಪಿಯನ್ ತಂಡಕ್ಕೆ ₹25 ಸಾವಿರ ಹಾಗೂ ರನ್ನರ್ಸ್ ಅಪ್ ತಂಡಕ್ಕೆ ₹15 ಸಾವಿರ ಬಹುಮಾನ ಲಭಿಸಿತು.
ಯಶ್ ಜವಳಿ (ಎ 1 ವಿಭಾಗ), ದಿನೇಶ ಶೆಟ್ಟಿ (ಎ), ಸಂಭ್ರಮ ಕೋಳಿವಾಡ (ಬಿ 1), ಡಾ. ವಸಂತ ತೆಗ್ಗಿನಮನಿ (ಬಿ 2) ದಿಬಾ ಮಳಗಿ (ಬಿ 3) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.ಹಾಗೂ ವಿಶ್ವನಾಥ ಉಪ್ಪಿನ ‘ಉತ್ತಮ ಡ್ರಿಬಲ್’ ಗೌರವಕ್ಕೆ ಪಾತ್ರರಾದರು. ನಾಲ್ಕು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.
ಸಮಾರೋಪ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಪಾಲಿಕೆ ಸದಸ್ಯ ವೀರಣ್ಣ ಸವಡಿ ಮಾತನಾಡಿ, ಇಂದು ಕ್ರೀಡೆಗೆ ಹಾಗೂ ಕ್ರೀಡಾ ಪಟುಗಳಿಗೆ ಪ್ರೋತ್ಸಾಹ ಸಿಗುತ್ತದೆ. ಇಂಥ ವೇದಿಕೆಯನ್ನು ಯುವ ಆಟಗಾರರು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು’ ಎಂದರು.
ಜಿಮ್ಖಾನಾ ಕ್ಲಬ್ ಅಧ್ಯಕ್ಷ ಅರುಣ ನಾಯ್ಕ, ಕಾರ್ಯದರ್ಶಿ ಸಂಜಯ ಶೆಟ್ಟಿ, ಸಂಕಲ್ಪ ಶೆಟ್ಟರ್, ಉದ್ಯಮಿ ಮುರುಗೇಶ ಹಂಚಿನ, ಶೀತಲ್ ಗೋಟಡ್ಕಿ, ಡಿ.ಕೆ. ಶ್ರೀನಾಥ, ಗಿರೀಶ್ ವೀಣಾ, ಜಿಪಿಎಲ್ ಸಂಚಾಲಕ ಉದಯ ಬಾಡಕರ್, ಜಿಪಿಎಲ್‌ನ ತಂಡಗಳ ಮಾಲೀಕರಾದ ಮನೀಷ್ ಠಕ್ಕರ್, ನಿತಿನ್ ಶೆಣೈ, ಎಂ.ಬಿ. ಕಲ್ಲೂರ, ಸ್ಮಿತಾ ಮಹೇಶ, ಅಂಜನಾ ಬಸನಗೌಡರ, ಶೀನು ಕಾಟವೆ, ದತ್ತ ಕಾಟವೆ ಪಾಲ್ಗೊಂಡಿದ್ದರು.
